ಬಳ್ಳಾರಿ: ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಸೇರಿದಂತೆ ಈಚೆಗೆ ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ದೆಹಲಿಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಅತ್ಯಾಚಾರ ಪ್ರಕರಣ ನೆನಪಿಸುವ ರೀತಿಯಲ್ಲಿ ಬೆಂಗಳೂರಿನ ಪುಲಕೇಶಿನಗರದಲ್ಲಿ ಅತ್ಯಾಚಾರ ನಡೆದಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ವಿದ್ಯಾರ್ಥಿನಿ ಮೇಲೆ ತನ್ನ ಗೆಳೆಯನ ಸಮ್ಮುಖದಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ನಾಸೀರ್ ಹೈದರ್ನನ್ನು ಗಲ್ಲಿಗೇರಿಸಬೇಕು. ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ದೂರು ಕೊಟ್ಟರೂ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಉದಾಸೀನ ತೋರಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ನನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕವೊಂದರಲ್ಲೇ 2009ರಿಂದ 2011ರ ವರಗೆ 14,989 ಮಹಿಳೆಯರು ಕಾಣೆಯಾಗಿದ್ದಾರೆ. ಕೇವಲ ಬೆಂಗಳೂರಲ್ಲೇ ಪ್ರಸಕ್ತ ಸಾಲಿನಲ್ಲಿ 325 ಬಾಲಕಿಯರು ಹಾಗೂ 151 ಯುವತಿಯರ ಮೇಲೆ ಅತ್ಯಾಚಾರ ನಡೆದ ಬಗ್ಗೆ ದಾಖಲಾಗಿದೆ. 1061 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರಗಳೇ ಹೆಚ್ಚಾಗಿದೆ. ಈ 3 ವರ್ಷಗಳಲ್ಲಿ ಕೇವಲ 118 ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಉಳಿದ ಪ್ರಕರಣಗಳು ವಿಚಾರಣೆ ನಡೆಯುತ್ತಿದೆ.
ಈ ರೀತಿ ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಬ್ಲಾಕ್ಮೇಲ್, ಹಿಂಸೆ ಮೊದಲಾದ ಲೈಂಗಿಕ ದೌರ್ಜನ್ಯಗಳಿಗೆ ಮುಕ್ತಿ ಹಾಡಲು ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡ ಮಹಿಪಾಲ್ ರೆಡ್ಡಿ, ನಾಗರಾಜ, ಅಶ್ವಿನಿ, ಓಂಪ್ರಕಾಶ್, ಬಾಲಪ್ಪ ಹಾಗೂ ನೂರಾರು ವಿದ್ಯಾರ್ಥಿನಿಯರು ಇದ್ದರು.