ಆದರ್ಶ ಗುಣವಿದ್ದರೆ ಗುರುವಿನ ಶಕ್ತಿ ಅರ್ಥ
ಕನ್ನಡಪ್ರಭ ವಾರ್ತೆ, ಕುರುಗೋಡು, ಜು. 17
ಗುರುವಿನ ಶಕ್ತಿ ಅರ್ಥ ಮಾಡಿಕೊಳ್ಳಬೇಕಾದರೆ ಶಿಷ್ಯನಲ್ಲಿ ಸೇವಾ ಮನೋಭಾವ ಹಾಗೂ ಆದರ್ಶ ಗುಣ ಇರಬೇಕು ಎಂದು ಹಂಪಿ ಸಾವಿರ ಮಹಾಂತ ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಲ್ಲಿಗೆ ಸಮೀಪದ ಎಮ್ಮಿಗನೂರು ಗ್ರಾಮದ ಮಹಾಂತ ಮಠದಲ್ಲಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ನಾಲವಾಡ ವೀರೇಶ್ವರ ಶರಣರ ಪುರಾಣ ಮಂಗಲದ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿ, ಗುರುವಿನ ಸಾನ್ನಿಧ್ಯದಲ್ಲಿದ್ದು ಬಾಳಿದರೆ ಬಾಳು ಬೆಳಗುವುದರಲ್ಲಿ ಸಂಶಯವಿಲ್ಲ ಎಂದರು.
ಕೆಎಂಎಫ್ ರಾಜ್ಯಾಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಮನಸ್ಸಿಗೆ ಸುಖ, ಶಾಂತಿ ಸಿಗುವುದು ಹಣದಿಂದಲ್ಲ. ಇಂತಹ ಮಠಗಳಿಂದ ಮಾತ್ರ ಎಂದು ಹೇಳಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಶಿಷ್ಯನಲ್ಲಿರುವ ಅಜ್ಞಾನ, ಅಂಧಕಾರ ತೊಲಗಿಸುವ ಜತೆಗೆ ಉತ್ತಮ ಗುರಿ ಹೊಂದಿ, ಶ್ರೇಷ್ಠ ಜೀವನ ಸಾಗಿಸಲು ಗುರು ನೆರವಾಗುತ್ತಾನೆ. ಗು ಎಂದರೆ ಅಜ್ಞಾನ, ರು ಎಂದರೆ ಹೋಗಲಾಡಿಸುವವನು, ಅಜ್ಞಾನವನ್ನು ಹೋಗಲಾಡಿಸಿ ಜ್ಞಾನ ಮಾರ್ಗದಲ್ಲಿ ನಡೆಸಲು ಗುರು ಅವಶ್ಯಕ ಎಂದರು.
ಮಾಜಿ ಸಂಸದ ಕೆ.ಸಿ. ಕೊಡಯ್ಯ ಮಾತನಾಡಿ, ರಾಜಕೀಯವಾಗಿ ನಾವುಗಳು ನಮ್ಮ ಪಕ್ಷ, ನಿಮ್ಮ ಪಕ್ಷ ಬೇರೆ ಮತ್ತು ಪೈಪೊಟಿಗಳಿರುತ್ತವೆ. ಆದರೆ ಮಠದಲ್ಲಿ ಬಂದರೆ ಎಲ್ಲರೂ ಒಂದೆ ಎನ್ನುವ ಭಾವನೆ ಇರುತ್ತದೆ ಎಂದರು. ನಂತರ ಚಳಗೇರಿಯ ವೀರಸಂಗ ಶಿವಾಚಾರ್ಯರು, ಕಲಾದಗಿ ಚಂದ್ರಶೇಖರ ಶಿವಾಚಾರ್ಯರು, ಮುಕ್ತಿ ಮಂದಿರದ ವಿಮಲರೇಣುಕ ಶಿವಾಚಾರ್ಯರು, ಶಿವಗಂಗೆ ಮಲಯ ಶಾಂತಮುನಿ ಶಿವಾಚಾರ್ಯರು, ಶಾನವಾಸಪುರ ಮಲ್ಲಿಕಾರ್ಜುನ ಶ್ರೀಗಳು ಆಶೀರ್ವಚನ ನೀಡಿದರು.
ಮಠಂ ಗುರುಪ್ರಸಾದ್, ಜಿಪಂ ಸದಸ್ಯ ವಿ. ಎರ್ರಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಿ. ಮಹೇಶಗೌಡ, ತಾಪಂ ಮಾಜಿ ಸದಸ್ಯ ಬಿ. ಸದಾಶಿವಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಾಪುರ ಮಲ್ಲಿಕಾರ್ಜುನ, ಬಳ್ಳಾರಿ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋನಾಳು ವಿರೂಪಾಕ್ಷಗೌಡ, ಸಿಪಿಐ ಲಕ್ಷ್ಮಿಕಾಂತಯ್ಯ, ಪಿಎಸ್ಐ ಜಿ. ಸೋಮಶೇಖರ ಹಾಗೂ ಗ್ರಾಮಸ್ಥರು ಇದ್ದರು.