ವರ್ಗಾವಣೆಯಲ್ಲಿ ನಿರತ ಸಚಿವ: ಮಧುನಾಯ್ಕ್
ಹೂವಿನಹಡಗಲಿ: ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ವರ್ಗಾವಣೆಯಲ್ಲಿ ತೊಡಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಎಲ್. ಮಧುನಾಯ್ಕ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಸಾಕಷ್ಟು ಕಳಪೆಯಾಗಿದೆ. ಸ್ಥಳಕ್ಕೆ ಅಧಿಕಾರಿಗಳಾಗಲಿ, ಸಚಿವರಾಗಲಿ ಭೇಟಿ ನೀಡಿ ಪರಿಶೀಲನೆ ಮಾಡುವ ಗೋಜಿಗೆ ಹೋಗಿಲ್ಲ, ಸಚಿವರಿಗೆ ಈ ಜಿಲ್ಲೆಯ ಅಭಿವೃದ್ಧಿ ಬೇಕಾಗಿಲ್ಲ. ಕಾರಣ ಇವರು ದಾವಣಗೆರೆ ಜಿಲ್ಲೆಯವರಾಗಿದ್ದರಿಂದ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಹಿಂದಿನ ಸರ್ಕಾರ ರು. 18 ಕೋಟಿ ಬಿಡುಗಡೆ ಮಾಡಿ ಗುತ್ತಿಗೆ ನೀಡಿದ್ದು, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸಚಿವ ಪರಮೇಶ್ವರ ನಾಯ್ಕ ಕುಮ್ಮಕ್ಕು ನೀಡುತ್ತಿದ್ದಾರೆ. ಕಣ್ಣೆದುರೆ ಕಳೆಪೆ ಕಾಮಗಾರಿ ನಡೆಯುತ್ತಿದ್ದರೂ ಯಾರೂ ಪ್ರಶ್ನಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಜನಪ್ರತಿನಿಧಿಗಳಿಂದ ಕ್ಷೇತ್ರಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದರು.
ಪಂಚಾಯತ್ ರಾಜ್, ಸಣ್ಣ ನೀರಾವರಿ, ಕೆಆರ್ಐಡಿಎಲ್ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಿಗಳೆ ಇದ್ದಾರೆ. ಉಸ್ತುವಾರಿ ಸಚಿವರಾಗಿ ಅಧಿಕಾರಿಗಳನ್ನು ತಂದು ಹಾಕುವಷ್ಟು ಶಕ್ತಿ ಇಲ್ಲದಾಗಿದೆ. ಇದರಿಂದ ಸಾರ್ವಜನಿಕರು ಇಲಾಖೆಗಳಿಗೆ ಅಲೆದಾಡುತ್ತಾ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಗಣಿ ಮಾಫಿಯಾದ ಬಗ್ಗೆ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ್ದರು. ಆದರೆ ಸಚಿವರ ಸ್ವಕ್ಷೇತ್ರದಲ್ಲೇ ಹಾಡು ಹಗಲೆಘ ಮರಳು ಮಾಫಿಯಾ ತಲೆ ಎತ್ತಿ ನಿಂತಿದೆ. ಸಚಿವರು ಇದಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ನೆಪಕ್ಕೆ ಸರ್ಕಾರಿ ಸ್ಟಾಕ್ಯಾರ್ಡ್ಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಏಜೆಂಟರು ನಿತ್ಯ ಮರಳು ಲೂಟಿ ಮಾಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.
ಬಡವರಿಗೆಂದು ನೀಡುತ್ತಿರುವ ಹೂವಿನಹಡಗಲಿ ತಾಲೂಕಿನ ಅನ್ನಭಾಗ್ಯದ 250 ಚೀಲ ಗೋದಿ ಸಾಗಿಸುವಾಗ ಚಳ್ಳಕೇರಿ ಪೊಲೀಸರು ದಾಳಿ ಮಾಡಿ ಹಿಡಿದಿದ್ದಾರೆ. ಸಚಿವರ ಕ್ಷೇತ್ರದಲ್ಲೇ ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳು ಗೋದಿ, ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಮುಖಂಡ ವೈ. ಜಯಣ್ಣ, ಅಕ್ಕಿ ಹಾಲೇಶ, ಮೈಲಾರ ಜಗದೀಶಗೌಡ, ಬೀರಬ್ಬಿ ಬಸವರಾಜ ಮತ್ತಿತರರು ಇದ್ದರು.