ಅಂತಾರಾಜ್ಯ ಮೊಬೈಲ್ ಕಳ್ಳರ ಬಂಧನ
ಕಂಪ್ಲಿ: ಕಂಪ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಟಾಟಾ ವೆಂಚರ್ ವಾಹನದಲ್ಲಿ ರು. 1,87,550 ಬೆಲೆ ಬಾಳುವ ಭಾರಿ ಪ್ರಮಾಣದ ಮೊಬೈಲ್ಗಳು ದೊರೆತಿರುವ ಘಟನೆ ಶುಕ್ರವಾರ ಜರುಗಿದೆ.
ಸಿಪಿಐ ವಿ. ರಘುಕುಮಾರ್ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪಿಎಸ್ಐ ಎಚ್. ದೊಡ್ಡಣ್ಣ, ಡಿ. ಹುಲುಗಪ್ಪ ಮತ್ತು ಸಿಬ್ಬಂದಿ ಕಂಪ್ಲಿ-ಕೋಟೆ ಪ್ರದೇಶದ ಸುಂಕಲಮ್ಮ ದೇವಸ್ಥಾನ ಬಳಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಾಹನ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರ ಪ್ರದೇಶ ನೊಂದಣಿಯ ಟಾಟಾ ವೆಂಚರ್ ವಾಹನ ಬಂದಿದೆ. ಅದನ್ನು ತಪಾಸಣೆ ನಡೆಸುವ ವೇಳೆ ಭಾರಿ ಪ್ರಮಾಣದ ಮೊಬೈಲ್ಗಳಿರುವುದು ಕಂಡು ಬಂದಿದ್ದು, ವಾಹದಲ್ಲಿದ್ದವರನ್ನು ವಿಚಾರಿಸಿದಾಗ ಅವರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಅವರನ್ನು ಬಂಧಿಸುವ ಸಂದರ್ಭದಲ್ಲಿ ವೆಂಕಟೇಶ ಎನ್ನುವ ವ್ಯಕ್ತಿ ಪರಾರಿಯಾಗಿದ್ದಾನೆ. ಹೌಲಾಬಾಬು ಮತ್ತು ರಾಜೇಶ್ ಎಂಬಿಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂಲತಃ ಹೈದ್ರಾಬಾದ್ನ ಕಮ್ಮಾರೆಡ್ಡಿ ಪ್ರದೇಶದವರಾಗಿದ್ದು, ಬಿಜಾಪುರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮೊಬೈಲ್ ಕಳ್ಳತನ ಮಾಡಿದ್ದಾರೆ. ಕಂಪ್ಲಿ ಭಾಗದಲ್ಲಿ ಕಳ್ಳತನ ಮಾಡಲು ಹಾಗು ಕಳ್ಳತನ ಮಾಡಿದ ಮೊಬೈಲ್ ಮಾರಾಟ ಮಾಡಲು ಮಾಡಲು ಬಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಬಂಧಿತರಿಂದ ರು. 1,87,550 ಬೆಲೆ ಬಾಳುವ 43 ಮೊಬೈಲ್, ಟಾಟಾ ವೆಂಚರ್ ವಾಹನ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ವಿಜಯಕುಮಾರ್, ವೆಂಕಟೇಶ್, ಸುಧೀರ್, ತಿಪ್ಪಣ್ಣ, ರಫೀಕ್, ಹನುಮಂತಪ್ಪ ಇದ್ದರು.