ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ
ಬಳ್ಳಾರಿ: ಸಮರ್ಪಕ ಕುಡಿವ ನೀರು ಸರಬರಾಜಿಗೆ ಆಗ್ರಹಿಸಿ, ಸ್ಥಳೀಯ ಹೌಸಿಂಗ್ಬೋರ್ಡ್ ಕಾಲೋನಿ, ಸಿದ್ಧಾರ್ಥ ನಗರ ಕಾಲೋನಿ ನಿವಾಸಿಗಳು ಸ್ಥಳೀಯ ಮೋಕಾ ರಸ್ತೆಯಲ್ಲಿ ಖಾಲಿ ಕೊಡಗಳನ್ನಿಟ್ಟು ಶನಿವಾರ ಪ್ರತಿಭಟನೆ ನಡೆಸಿದರು. 15 ದಿನಗಳಿಂದ ಬಡಾವಣೆಗಳಿಗೆ ಕುಡಿವ ನೀರು ಸರಬರಾಜಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಪಾಲಿಕೆ ಆಡಳಿತದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ಕುಡಿವ ನೀರಿನ ಸಮಸ್ಯೆ ಕುರಿತು ಕಾಳಜಿ ವಹಿಸದ ಚುನಾಯಿತ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು. ಸ್ಥಳಕ್ಕೆ ಪಾಲಿಕೆ ಆಯುಕ್ತರೇ ಆಗಮಿಸಬೇಕು ಎಂದು ಪಟ್ಟು ಹಿಡಿದು, ಖಾಲಿ ಕೊಡಗಳನ್ನು ರಸ್ತೆಯಲ್ಲಿಟ್ಟು ಧರಣಿ ಕುಳಿತರು. ಸ್ಥಳೀಯ ನಿವಾಸಿಗಳಾದ ಅನಿಲ್ನಾಯ್ಡು, ರಾಘವೇಂದ್ರ ರೆಡ್ಡಿ, ಅಶೋಕ್ ಸೇರಿದಂತೆ ಹೌಸಿಂಗ್ಬೋರ್ಡ್ ಕಾಲೋನಿ, ಸಿದ್ಧಾರ್ಥ ನಗರದ ನೂರಾರು ನಿವಾಸಿಗಳು ಇದ್ದರು.