ವಿಶ್ವ ಜನಸಂಖ್ಯಾ ದಿನಾಚರಣೆ: ಮಕ್ಕಳಿಗೆ ಸ್ಪರ್ಧೆ
ಹೂವಿನಹಡಗಲಿ: ತಾಲೂಕಿನ 63 ತಿಮ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯ ಶಿಕ್ಷಕ ಎಂ. ಸಿದ್ದೇಶ ಮಾತನಾಡಿ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಭಾರತ ಮುಂಚೂಣಿಯಲ್ಲಿದ್ದರೂ, ಏರುತ್ತಿರುವ ಜನಸಂಖ್ಯೆಯಿಂದಾಗಿ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ. ಜನಸಂಖ್ಯೆ ನಿಯಂತ್ರಣದಲ್ಲಿದ್ದರೆ ಮಾತ್ರ ಎಲ್ಲರಿಗೂ ಮೂಲ ಸೌಕರ್ಯ ದೊರೆಯಲು ಸಾಧ್ಯ ಎಂದರು. ಎಸ್ಡಿಎಂಸಿ ಸದಸ್ಯ ಹೆಗ್ಗಪ್ಪ ಕೋಟಿಹಾಳ, ಹಿರಿಯ ಶಿಕ್ಷಕ ಜಿ. ಮಲ್ಲಿಕಾರ್ಜುನಗೌಡ, ಬಿ. ಪ್ರಕಾಶ, ಎಂ. ಜಡೆಸಿದ್ದೇಶ್ವರ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ರಸಪ್ರಶ್ನೆ ಹಾಗೂ ಚರ್ಚಾಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಕ್ಷಕ ಸಂತೋಷ ರಾಠೋಡ್ ನಿರ್ಣಾಯಕರಾಗಿದ್ದರು. ಶಿಕ್ಷಕ ಪಿ.ಎಂ. ಗಂಗಾಧರಯ್ಯ ಸ್ವಾಗತಿಸಿದರು.