ಸೊಸೆ ಮೇಲೆ ಅತ್ಯಾಚಾರ, 3 ತಿಂಗಳು ಸಂಸಾರ!
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜು. 19
ಸೊಸೆಯ ಮೇಲೆ ಮಾವನೇ ಅತ್ಯಾಚಾರ ನಡೆಸಿದ್ದಾನೆ. ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಆಕೆಯನ್ನು ಮೈಸೂರಿಗೆ ಕರೆದೊಯ್ದು ಮೂರು ತಿಂಗಳು ಸಂಸಾರ ಮಾಡಿದ್ದಾನೆ. ಈಗ ಗ್ರಾಮಕ್ಕೆ ಮರಳಿರುವ ಸೊಸೆ, ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ಇಂತಹ ವಿಲಕ್ಷಣ ಘಟನೆ ನಡೆದಿದ್ದು ತಾಲೂಕಿನ ಐಗಳ ಮಲ್ಲಾಪುರ ಗ್ರಾಮದಲ್ಲಿ. ಚೆನ್ನಿಗಪ್ಪ (53) ಎಂಬಾತ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮಗನ ಹೆಂಡತಿಯನ್ನೇ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ಚೆನ್ನಿಗಪ್ಪನ ಪತ್ನಿಗೆ ಗೊತ್ತಿದ್ದರೂ, 'ನನ್ನ ಗಂಡನನ್ನು ನೀನೇ ಬುಟ್ಟಿಗೆ ಹಾಕಿಕೊಂಡಿದ್ದೀಯ' ಎಂದು ಸೊಸೆಯನ್ನೇ ದೂರಿದ್ದಾಳೆ. ಆದರೆ, ಮನೆಯ ಇತರ ಸದಸ್ಯರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಚೆನ್ನಿಗಪ್ಪ ಸೊಸೆಯನ್ನು ಬಲವಂತವಾಗಿ ಮೈಸೂರು ಜಿಲ್ಲೆಯ ಕೆ.ಆರ್. ಪೇಟೆ ತಾಲೂಕು ಬೂಕನಕೆರೆ ಗ್ರಾಮಕ್ಕೆ ಕರೆದೊಯ್ದು, ಅಲ್ಲಿ ಮನೆ ಮಾಡಿ ಸಂಸಾರ ನಡೆಸಿದ್ದಾನೆ.
ಊರಲ್ಲಿದ್ದ ತನ್ನ ಐದು ವರ್ಷದ ಮಗನ ನೆನಪಾಗಿ ಸೊಸೆ, ತನ್ನನ್ನು ಊರಿಗೆ ಕರೆದೊಯ್ಯುವಂತೆ ಒತ್ತಾಯಿಸಿದ್ದಾಳೆ. ವಾರದ ಹಿಂದಷ್ಟೇ ಆಕೆಯನ್ನು ಊರಿಗೆ ಕರೆತಂದ ಚೆನ್ನಿಗಪ್ಪ, ತೋಟದ ಮನೆಯಲ್ಲಿ ಇರಿಸಿದ್ದಾನೆ. ಗಂಡ ಇನ್ನೊಂದು ಮದುವೆ ಆಗಿರುವುದರಿಂದ ಕಂಗಾಲಾದ ಈ ಮಹಿಳೆ ಅದು ಹೇಗೋ ತನ್ನ ತವರು ಮನೆಯವರು ಹಾಗೂ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಚೆನ್ನಿಗಪ್ಪನನ್ನು ಥಳಿಸಿದ್ದಾರೆ. ಆತ ಈಗ ತಲೆ ಮರೆಸಿಕೊಂಡಿದ್ದಾನೆ.
ಗ್ರಾಮಸ್ಥರ ಸಹಾಯದಿಂದ ಮಹಿಳೆ ಗುರುವಾರ ರಾತ್ರಿ ಕೂಡ್ಲಿಗಿ ತಾಲೂಕು ಕಾನಾಹೊಸಹಳ್ಳಿ ಠಾಣೆಯಲ್ಲಿ ಮಾವ ಮತ್ತು ಗಂಡನ ಅಣ್ಣನ ಮೇಲೆ ದೂರು ನೀಡಿದ್ದಾಳೆ. ಕೂಡ್ಲಿಗಿ ಡಿವೈಎಸ್ಪಿ ಗಜಕೋಶ್, ಕೊಟ್ಟೂರು ಸಿಪಿಐ ಲಾಲ್ಯಾನಾಯ್ಕ, ಹೊಸಹಳ್ಳಿ ಪಿಎಸ್‌ಐ. ರಘುನಾಥ ಐಗಳ ಮಲ್ಲಾಪುರ ಗ್ರಾಮಕ್ಕೆ ಆಗಮಿಸಿ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ