ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾಧ್ಯಮಕ್ಕೆ ಸಮಾಜ ತಿದ್ದುವ ಶಕ್ತಿ ಇದೆ

Mainashree
Updated On : 21 Jul 2014, 9:52 am

ಬಳ್ಳಾರಿ: ಮಾಧ್ಯಮಗಳಿಗೆ ಸಮಾಜದಲ್ಲಿ ಸುಧಾರಣೆ, ಜಾಗೃತಿ ಮೂಡಿಸುವ ಶಕ್ತಿ ಇದೆ. ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಎಚ್ಚರಿಸುವ ಜತೆ ಗೆ ಜನಜಾಗೃತಿ ಉಂಟು ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ಬಳ್ಳಾರಿ ಮೀಡಿಯಾ ಕ್ಲಬ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
80ರ ದಶಕದಲ್ಲಿ ಪ್ರಾರಂಭವಾದ ಲಂಕೇಶ್ ಪತ್ರಿಕೆ ಆಗಿನ ಗುಂಡೂರಾವ್ ನೇತೃತ್ವದ ಸರ್ಕಾರದ ತಪ್ಪುಗಳನ್ನು ಜನತೆಗೆ ತಿಳಿಸುವ ಮೂಲಕ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಮೂಲಕ, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ (ಜನತಾರಂಗ) ಅಧಿಕಾರಕ್ಕೆ ಬರಲು ಕಾರಣವಾಯಿತು. ಹೀಗೆ ಪತ್ರಿಕೋದ್ಯಮವು ಸಾಮಾಜಿಕ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ಭೇದವಿಲ್ಲದೇ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸೋಣ. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ನಾನು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಂಸದ ಬಿ.ಶ್ರೀರಾಮುಲು ಒಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಸಂಸದ ಬಿ. ಶ್ರೀರಾಮುಲು ಮಾತನಾಡಿ, ಕಳೆದ 75 ವರ್ಷಗಳಿಂದ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ. ಧೀಮಂತ ಪತ್ರಕರ್ತರಾದ ತಿ.ತಾ. ಶರ್ಮಾ, ಡಿ.ವಿ. ಗುಂಡಪ್ಪ, ಪಾಟೀಲ್ ಪುಟ್ಟಪ್ಪ, ವೆಂಕಟಪ್ಪ ಅಯ್ಯಂಗಾರ್ ಹೀಗೆ ಅನೇಕ ಪತ್ರಕರ್ತರ ಸಾಧನೆ, ಒಳ್ಳೆಯ ಕೆಲಸ ಸ್ಮರಿಸಲು ಪತ್ರಿಕಾ ದಿನ ಆಚರಿಸಲಾಗುತ್ತಿದೆ ಎಂದರು.
ವಿಜಯವಾಣಿ ಪತ್ರಿಕೆಯ ಸಂಪಾದಕ ತಿಮ್ಮಪ್ಪ ಭಟ್, ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್, ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಮೀಡಿಯಾ ಕ್ಲಬ್ ಅಧ್ಯಕ್ಷ ಮಧುಸೂಧನ್ ಕಾಡ್ಲೂರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿಯ ಕನ್ನಡಪ್ರಭ ವರದಿಗಾರ ಭೀಮಣ್ಣ ಗಜಾಪುರ ಅವರಿಗೆ ಮತ್ತಿಹಳ್ಳಿ ನಾಗರಾಜ ರಾವ್ ಸ್ಮಾರಕ ಪ್ರಶಸ್ತಿ, ಕೂಡ್ಲಿಗಿ ವಿಜಯವಾಣಿ ವರದಿಗಾರ ಹುಡೆಂ ಕೃಷ್ಣಮೂರ್ತಿ ಅವರಿಗೆ ಚೇಳ್ಳಗುರ್ಕಿ ಶಿವನಗೌಡ ಮೇಟಿ ಸ್ಮಾರಕ ಪ್ರಶಸ್ತಿ ಹಾಗೂ ಸಿರುಗುಪ್ಪ ವಿಜಯವಾಣಿ ವರದಿಗಾರ ಪಂಪಾಪತಿ ಓತೂರು ಅವರಿಗೆ ಮದ್ದಿಕೇರಿ ತಿಪ್ಪಯ್ಯ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತ ಮಂಜುನಾಥ ಸಾಲಿ, ತಿಮ್ಮಪ್ಪ ಚೌದರಿ, ಇಮಾಮ್ ಗೋಡೇಕರ್, ಪರಶುರಾಮ ಕಲಾಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸೂರ್ಯ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಎಂಎಲ್ಸಿ ಮೃತ್ಯುಂಜಯ ಜಿನಗಾ, ಪಾಲಿಕೆ  ಉಪ ಮೇಯರ್ ಜಯಲಲಿತಾ, ಬಳ್ಳಾರಿ ಮೀಡಿಯಾ ಕ್ಲಬ್ ಕಾರ್ಯದರ್ಶಿ ಕೆ.ಎಂ. ಮಂಜುನಾಥ, ಕ್ಲಬ್ನ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement