ಪಡ್ಡೆಗಳಿಗೆ ಕಂಪ್ಲೇಂಟ್ ಬಾಕ್ಸ್ ಕುಣಿಕೆ!
ಬಳ್ಳಾರಿ: ಪಡ್ಡೆ ಹುಡುಗರೇ ಹುಷಾರ್... ರಸ್ತೆಯಲ್ಲಿ ಹೋಗುವ ಯುವತಿಯರು, ವಿದ್ಯಾರ್ಥಿನಿಯರನ್ನು ಚುಡಾಯಿಸಿದರೆ ಎಚ್ಚರ! ಹುಡುಗಿಯರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದು ಬೇಡ, ಚುಡಾಯಿಸಿದ ಹುಡುಗನ ಹೆಸರು, ವಿಳಾಸ, ಬೈಕ್ ನಂಬರ್‌ನ್ನು ದೂರಿನ ರೂಪದಲ್ಲಿ ವುಮೆನ್ ಕಂಪ್ಲೆಂಟ್ ಬಾಕ್ಸ್‌ಗೆ ಹಾಕಿದರೆ ಪೊಲೀಸರು ಪಡ್ಡೆ ಹುಡುಗರನ್ನು ಬೆನ್ನಟ್ಟುತ್ತಾರೆ.
ಪೊಲೀಸ್ ಮಹಾನಿರ್ದೇಶಕರು ಎಲ್ಲ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಿ, ಚುಡಾಯಿಸುವವರು, ಪಡ್ಡೆ ಹುಡುಗರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಮಹಿಳಾ ಕಾಲೇಜುಗಳು, ವಸತಿ ನಿಲಯಗಳಿಗೆ ತೆರಳಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಕಾಲೇಜು, ವಸತಿ ನಿಲಯ ಕಡೆಗಳಲ್ಲಿ ವುಮೆನ್ ಕಂಪ್ಲೇಂಟ್ ಬಾಕ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಆಯಾ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹಿಳಾ ಕಾಲೇಜುಗಳು, ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಆಯಾ ಠಾಣೆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮೊಬೈಲ್, ದೂರವಾಣಿ ಸಂಖ್ಯೆ ನೀಡಲಾಗುತ್ತದೆ.
ವುಮೆನ್ ಕಂಪ್ಲೇಂಟ್ ಬಾಕ್ಸ್....
ಬಹುತೇಕ ಯುವತಿಯರು, ಬಾಲಕಿಯರು ತಮಗೆ ಚುಡಾಯಿಸಿದ ಪಡ್ಡೆ ಹುಡುಗನ ಬಗ್ಗೆ, ಪೋಕರಿಗಳ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುವುದಕ್ಕೆ ಆಗುವುದಿಲ್ಲ. ಇನ್ನು ಮನೆಯಲ್ಲಿ ಹೇಳಿದರೆ ಎಲ್ಲಿ ಓದು ಬಿಡಿಸುತ್ತಾರೋ ಎಂಬ ಭಯ ಇರುತ್ತದೆ. ಇಂಥ ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ ವುಮೆನ್ಸ್ ಕಂಪ್ಲೇಂಟ್ ಬಾಕ್ಸ್ ನೆರವಾಗುತ್ತದೆ. ಕಿರುಕುಳ ನೀಡುವ ಹುಡುಗನ ಹೆಸರು, ಮಾಹಿತಿ, ಬೈಕ್ ನಂಬರ್ ಬರೆದು ಕಂಪ್ಲೇಂಟ್ ಬಾಕ್ಸ್‌ನಲ್ಲಿ ಹಾಕಿದರೆ ಸಾಕು, ಪೊಲೀಸರು ವಿಚಾರಣೆ ನಡೆಸುತ್ತಾರೆ. ಕಂಪ್ಲೇಂಟ್ಸ್ ಬಾಕ್ಸ್‌ನಲ್ಲಿರುವ ದೂರುಗಳನ್ನು ಪ್ರತಿದಿನ ಠಾಣೆ ಮೇಲಧಿಕಾರಿಗಳು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತಾರೆ. ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ವ್ಯವಸ್ಥೆಯನ್ನು ಮಂಗಳವಾರ ಆರಂಭಿಸಲಾಗಿದೆ. ಕೆಲವು ಕಡೆಗಳಲ್ಲಿ ಸೋಮವಾರವೇ ಅಳವಡಿಸಿದ್ದಾರೆ.
-ಶಶಿಧರ ಮೇಟಿ