ಲೈಂಗಿಕ ದೌರ್ಜನ್ಯ ಕುರಿತು ಜನ ಜಾಗೃತಿ ಕಾರ್ಯಕ್ರಮ
ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದ್ದು, ಶಾಲಾ ಮಕ್ಕಳು ಅತ್ಯಂತ ಎಚ್ಚರದಿಂದ ಮತ್ತು ಜಾಗೃತಿಯಿಂದ ಶಾಲೆಗೆ ಹೋಗಿ ಬರಬೇಕು ಎಂದು ಕಮಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎಸ್. ಹನುಮಂತಪ್ಪ ಹೇಳಿದರು.
ತಾಲೂಕಿನ ಬುಕ್ಕಸಾಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊರಗಿನ ಯಾವುದೇ ವ್ಯಕ್ತಿಗಳು ಶಾಲಾ ಆವರಣದಲ್ಲಿ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಒಬ್ಬಂಟಿಯಾಗಿ ಸಂಚಾರ ಮಾಡದೆ, ಗುಂಪು ಗುಂಪಾಗಿ ವಿದ್ಯಾರ್ಥಿಗಳು ಹೋಗಿ ಬರಬೇಕು. ಯಾರಾದರೂ ಚುಡಾಯಿಸಿದರೆ ಶಾಲೆಯ ಶಿಕ್ಷಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು ಎಂದು ಹೇಳಿದರು.
ಶಾಲೆಯ ಮುಖ್ಯಗುರು ಡಿ. ಕಾಸೀಂಸಾಹೇಬ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿನಿಯರ ಬಗ್ಗೆ ಶಿಕ್ಷಕರು ವಿಶೇಷ ಗಮನವಹಿಸುತ್ತಿದ್ದು, ವಿದ್ಯಾರ್ಥಿನಿಯರಿಗೆ ಏನಾದರೂ ತೊಂದರೆಯಾದಲ್ಲಿ ಮಹಿಳಾ ಶಿಕ್ಷಕರಿಗೆ ಮತ್ತು ಮುಖ್ಯಗುರುಗಳ ಗಮನಕ್ಕೆ ತರಬೇಕು ಎಂದರು.
ಕಮಲಾಪುರ ಠಾಣೆ ಎಎಸ್‌ಐ ರಾಮಚಂದ್ರ ಆಚಾರ್, ಶಾಂತಮ್ಮ, ಗೋಪಾಲಕೃಷ್ಣಾಚಾರ್, ಎಂ.ಆರ್. ಸುರೇಶ್ ಇತರರು ಸಭೆಯಲ್ಲಿದ್ದರು.