ಬಳ್ಳಾರಿ

4 ವರ್ಷದಲ್ಲಿ 3ನೇ ಚುನಾವಣೆ

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 23
ನಾಲ್ಕು ವರ್ಷಗಳಲ್ಲಿ ಮೂರು ವಿಧಾನಸಭಾ ಚುನಾವಣೆ, ಅದರಲ್ಲಿ ಎರಡು ಉಪಚುನಾವಣೆ, ಒಂದು ಸಾರ್ವತ್ರಿಕ ಚುನಾವಣೆ. ಇದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ವಿಶೇಷತೆ.
ಕ್ಷೇತ್ರ ವಿಂಗಡಣೆಯ ಬಳಿಕ ರಾಜ್ಯದಲ್ಲೇ ಪ್ರಥಮ ಬಾರಿಗೆ ನಾಲ್ಕು ವರ್ಷಗಳಲ್ಲಿ ಮೂರು ಚುನಾವಣೆ ಎದುರಿಸಿದ ಕ್ಷೇತ್ರ ಎಂಬುದು ಹೆಮ್ಮೆಯ ವಿಚಾರವೇನೂ ಅಲ್ಲ. ನೀತಿ ಸಂಹಿತೆ ಹೆಸರಿನಲ್ಲಿ ಆಗಾಗ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಚುನಾವಣೆ ನೆಪದಲ್ಲಿ ಕೋಟಿಗಟ್ಟಲೆ ಹಣ ಹರಿಯುತ್ತಿದೆ. ಇದು ಕ್ಷೇತ್ರದ ಜನರಲ್ಲಿ ಬೇಸರ ಮೂಡಿಸಿದ್ದರೂ ಉಪ ಚುನಾವಣೆಗೆ ಕಾರಣರಾದವರನ್ನೇ ಮತದಾರ ಮತ್ತೆ ಮತ್ತೆ ಕೈ ಹಿಡಿದಿರುವುದು ವಿಶೇಷ.
ಬಿ. ಶ್ರೀರಾಮುಲು 2011ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬಿಜೆಪಿ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾದರು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಶಾಸಕರಾದರು. ಮೋದಿ ಬೆಂಬಲಿಸಲು ಬಿಜೆಪಿ ಸೇರಿ, ಈಗ ಸಂಸದರೂ ಆಗಿದ್ದಾರೆ. ಅದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಮತ್ತೆ ಚುನಾವಣೆ ಎದುರಾಗಿದೆ.
ಶ್ರೀರಾಮುಲುಗೆ ಒಲಿದಿತ್ತು ಗ್ರಾಮೀಣ ಕ್ಷೇತ್ರ
ಕ್ಷೇತ್ರ ಪುನರ್ ವಿಂಗಡನೆ ಬಳಿಕ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಅವರೇ ಗೆಲ್ಲುತ್ತಾ ಬಂದಿದ್ದಾರೆ. 2008ರ ವಿಧಾನಸಭೆ ಚುನಾವಣೆಯಲ್ಲಿ 25,716 ಮತಗಳಿಂದ ಶ್ರೀರಾಮುಲು ಜಯ ಗಳಿಸಿದರು. 2011ರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು 46,790 ಮತಗಳಿಂದ ಸೋಲಿಸಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ 33,294 ಮತಗಳಿಂದ ಗೆದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಬಳ್ಳಾರಿ ಗ್ರಾಮೀಣ ಜನತೆ ಅವರಿಗೆ 9244 ಮತಗಳ ಲೀಡ್ ಕೊಟ್ಟರು.
ಕೋಟ್ಯಂತರ ರು. ವೆಚ್ಚ
ಬಳ್ಳಾರಿ ಗ್ರಾಮೀಣ ಕ್ಷೇತ್ರ ನಾಲ್ಕು ವರ್ಷದಲ್ಲಿ ಮೂರನೇ ಚುನಾವಣೆ ಎದುರಿಸುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ವೆಚ್ಚವಾಗುತ್ತಿದೆ. 2011ರ ಚುನಾವಣೆಯಲ್ಲಿ ಸಿಬ್ಬಂದಿಗೆ ಗೌರವಧನ, ಮತ ಎಣಿಕೆ ಸಿಬ್ಬಂದಿ ಗೌರವಧನ, ಜನರಲ್ ಫಂಡ್ ಎಂದು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಖರ್ಚು ಮಾಡಿದ ಹಣ ಅಂದಾಜು ರು. 52 ಲಕ್ಷ. ಪೊಲೀಸ್ ಹಾಗೂ ಇತರ ಇಲಾಖೆಗಳೂ ದೊಡ್ಡ ಮೊತ್ತ ವಿನಿಯೋಗಿಸಿವೆ. 2013ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ರು. 57,86,928 ಖರ್ಚಾಗಿದೆ. ಪರೋಕ್ಷ ವೆಚ್ಚಗಳ ಲೆಕ್ಕ ಕೋಟಿಗಳ ಗಡಿ ದಾಟುತ್ತದೆ.
ಖರ್ಚಿನ ವಿಚಾರ ಮಾತ್ರವಲ್ಲದೆ, ಆಗಾಗ ಚುನಾವಣೆ ನಡೆದರೆ ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ. ಅನುದಾನ ಬಳಕೆಗೂ ಪೆಟ್ಟ ಬೀಳುತ್ತದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಆ. 21ಕ್ಕೆ ಉಪಚುನಾವಣೆ ನಿಗದಿಯಾಗಿದೆ. ಕ್ಷೇತ್ರ ಪುನರ್ವಿಂಗಡಣೆಯಾದ ಮೇಲೆ ಮೀಸಲು ಕ್ಷೇತ್ರವಾದ ಬಳ್ಳಾರಿ ಗ್ರಾಮೀಣದಲ್ಲಿ ಮತದಾರರು ಶ್ರೀರಾಮುಲು ಅವರನ್ನೇ ಸತತವಾಗಿ ಕೈ ಹಿಡಿದಿದ್ದಾರೆ. ಈ ಸಲ ಅವರು ಸಂಸದರು. ಬೇರೊಬ್ಬರು ಕಣಕ್ಕಿಳಿಯುವುದು ಅನಿವಾರ್ಯ. ಮತದಾರರು ಯಾವ ರೀತಿ ಸ್ಪಂದಿಸುತ್ತಾರೋ? ಕಾದು ನೋಡಬೇಕಾಗಿದೆ.
- ಶಶಿಧರ ಮೇಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ