ಅಂಗವಿಕಲರ ಬೇಡಿಕೆ ಈಡೇರಿಸಿ
ಬಳ್ಳಾರಿ: ಅಂಗವಿಕಲರಿಗೆ ಕನಿಷ್ಠ ಮಾಸಿಕ ಪೋಷಣಾ ಭತ್ಯೆ ನೀಡಬೇಕು. ಏಕರೂಪ ಗುರುತಿನ ಚೀಟಿ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಬಳ್ಳಾರಿ ತಾಲೂಕು ಸಮಿತಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಒಕ್ಕೂಟದ ಕಾರ್ಯಕರ್ತರು, ಗಡಿಗಿ ಚೆನ್ನಪ್ಪ ವೃತ್ತದ ಬಳಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಒಕ್ಕೂಟದ ತಾಲೂಕು ಸಮಿತಿಯ ಅಧ್ಯಕ್ಷ ಚಾಗನೂರು ನಾಗರಾಜ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕಳೆದೊಂದು ದಶಕದಲ್ಲಿ ಬೆಲೆ ಏರಿಕೆ ನಿರಂತರವಾಗಿ ನಡೆದಿದೆ. ಇಂದಿನ ದುಬಾರಿ ದಿನಗಳಲ್ಲಿ ತಿಂಗಳಿಗೆ ರು. 500 ಪೋಷಣಾ ಭತ್ಯೆಯಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಂಗವಿಕಲರಿಗೆ ರು. 3 ಸಾವಿರ ಪೋಷಣಾ ಭತ್ಯೆ ನೀಡುವಂತೆ ಹಾಗೂ ವಿಕಲ ಚೇತನರಿಗೆ ಬಸ್ಪಾಸ್, ರೈಲ್ವೆ ಪಾಸ್, ಉದ್ಯೋಗ, ಶಿಕ್ಷಣ ಸೌಲಭ್ಯಕ್ಕಾಗಿ ಏಕರೂಪದ ಗುರುತಿನ ಚೀಟಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಶೇಕಡಾ 40 ರಿಂದ 74ರಷ್ಟು ಅಂಗವಿಕಲತೆ ಇದ್ದವರಿಗೆ ರು. 3 ಸಾವಿರ ಮಾಸಾಶನ, ಶೇ.75ಕ್ಕೂ ಹೆಚ್ಚಿನ ಅಂಗವಿಕಲತೆ ಇದ್ದವರಿಗೆ ಮಾಸಿಕ ರು. 5 ಸಾವಿರ ಪೋಷಣಾ ಭತ್ಯೆ(ಮಾಸಾಶನ) ನೀಡಬೇಕು. ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ಮೂರನೇ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದು-ಕೊರತೆ ಸಭೆ ಕರೆಯಬೇಕು. ಇದರಿಂದ ವಿಕಲಚೇತನರು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ನೇರವಾಗಿ ಹೇಳಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ವಿಕಲಚೇತನರಿಗೆ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ಕಡ್ಡಾಯವಾಗಿ ನೀಡಬೇಕು. ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಅಂಗವಿಕಲರಿಗೆ ಇರುವಂತಹ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ಶೌಚಾಲಯ ಸೌಲಭ್ಯವಿಲ್ಲದ ಅಂಗವಿಕಲರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕು ಕಾರ್ಯದರ್ಶಿ ಎನ್. ಕುಮಾರಪ್ಪ, ಮುಖಂಡ ಅಂದ್ರಾಳ್ ನಾಗರಾಜ, ವರಲಕ್ಷ್ಮಿ, ಅಡಿವೆಮ್ಮ, ಸೌದಮ್ಮ, ಸರಸ್ವತಿ, ವನ್ನೂರಪ್ಪ, ರುಕ್ಮಿಣಮ್ಮ, ತಿಮ್ಮನಾಯಕ್, ರಂಗಾರೆಡ್ಡಿ ಮತ್ತಿತರರು ಇದ್ದರು.