ಎಂಇಎಸ್, ಶಿವಸೇನೆ ಪ್ರತಿಕೃತಿ ದಹನ
ಹೊಸಪೇಟೆ: ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಗೂಂಡಾಗಿರಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೋಮವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಎಂಇಎಸ್ ಮತ್ತು ಶಿವಸೇನೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ಕರವೇ ತಾಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯದ ಮರಾಠಿ ಭಾಷೆಯ ನಾಮಫಲಕವನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು. ಬಳಿಕ ರಾಜ್ಯದ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆಸಿ, ಪುನಃ ನಾಮಫಲಕ ಹಾಕಿ ದುಸ್ಸಾಹಸ ಮೆರೆದು ಪೊಲೀಸರು, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದಾರೆ. ಎಂಇಎಸ್ ಮತ್ತು ಶಿವಸೇನೆ ಗುಂಡಾಗಳೇ ಈ ಕೆಲಸ ಮಾಡಿದ್ದು, ಇದಕ್ಕೆ ಶಾಸಕ ಸಂಭಾಜಿ ಪಾಟೀಲ್, ಮಾಜಿ ಶಾಸಕ ಮನೋಹರ್ ಕಿಣೇಕರ್ ಬೆಂಬಲಿಸಿದ್ದು, ಇವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಎಚ್. ಶ್ರೀನಿವಾಸ, ನಗರಸಭೆ ಸದಸ್ಯ ಕೆ. ಗೌಸ್, ಮುಖಂಡರಾದ ಅಮರೇಶ್ವರಯ್ಯ, ಪಂಪಾಪತಿ, ಬ್ಯಾಲಕುಂದಿ ರಮೇಶ್, ರಾಮಚಂದ್ರಪ್ಪ, ಆಂಜನೇಯಲು, ರಾಮು, ಸುವರ್ಣಾ, ಲಕ್ಷ್ಮಿ, ಎಚ್.ಆರ್.ವಿ. ಮಾಧವಿ, ಲತಾ, ಅರ್ಮುಗಂ, ಶೌಕತ್ ಅಲಿ, ರಫೀಕ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.