ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಖಾತ್ರಿಗೆ ಸುಪ್ರೀಂ ಆದೇಶ ಜಾರಿಯಾಗಲಿ

Rashmi Kasaragodu
Updated On : 29 Jul 2014, 11:18 am

ಕುರುಗೋಡು: ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಸುಪ್ರೀಂ ಕೋರ್ಟ್ ಅದೇಶ ಜಾರಿಗೆ ತರಬೇಕು ಎಂದು ಆಗ್ರಹಿಸಿ ಇಲ್ಲಿನ ತಹಸಿಲ್ದಾರ್ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಾನಾ ಗ್ರಾಮದ ಕೂಲಿಕಾರರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕು ಘಟಕದ ಆಧ್ಯಕ್ಷ ಗಾಳಿ ಬಸವರಾಜ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ನರೇಗಾ ಯೋಜನೆಯಡಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರತಿ ಕೂಲಿಕಾರರಿಗೆ ದಿನಕ್ಕೆ ರು. 269, 40 ಪೈಸೆ ದೊರೆಯಬೇಕಿದೆ. ಈ ಆದೇಶವನ್ನು ಗ್ರಾಪಂ, ತಾಪಂ ಮತ್ತು ಜಿಪಂ ಗಾಳಿಗೆ ತೂರಿದ ಕಾರಣ ಕೂಲಿಕಾರರಿಗೆ ಕೂಲಿ ವಂಚನೆಯಾಗಿದೆ.
ಯೋಜನೆಯಡಿ ಆದೇಶ ಜಾರಿಯಾದಾಗಿನಿಂದ ಈವರೆಗೆ ಕೆಲಸ ನಿರ್ವಹಿಸಿದ್ದು, ಇದಕ್ಕೆ ಕೋರ್ಟ್ ಆದೇಶದ ಪ್ರಕಾರ ಉಳಿದ ಕೂಲಿ ಹಣವನ್ನು ಕೂಲಿಕಾರರ ಬ್ಯಾಂಕ್ ಖಾತೆಗೆ ತಕ್ಷಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ಬಳಿಕ ಸಂಘದ ಉಪಾಧ್ಯಕ್ಷ ಎನ್. ಸೋಮಪ್ಪ ಮಾತನಾಡಿ, ಕೂಲಿ ಮಾಡಿದ ಹಣ ಕೂಲಿಕಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಗ್ರಾಪಂ ಆಡಳಿತ ವಿಳಂಬ ನೀತಿ ಅನುಸರಿಸುತ್ತಿವೆ. ಈ ತಾಂತ್ರಿಕ ತೊಂದರೆ ನಿವಾರಿಸಿ, ವಾರಕ್ಕೊಮ್ಮೆ ತಪ್ಪದೆ ಕೂಲಿ ನೀಡುವ ಕ್ರಮ ಕೈಗೊಳ್ಳಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಶೇಷ ತಹಸಿಲ್ದಾರ್ ಸುರೇಶ್‌ಬಾಬು ಮನವಿ ಸ್ವೀಕರಿಸಿ, ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಹುಲೆಪ್ಪ, ಪಿ. ಕರಿಬಸಪ್ಪ, ಕೆಂಚಪ್ಪ, ಅಂಜಿನೆಮ್ಮ, ಗಂಗಮ್ಮ ನೀಲಮ್ಮ, ರಂಗಪ್ಪ. ಹೊನ್ನೂರಪ್ಪ, ಎಚ್. ನಾಗಪ್ಪ, ಹೊಳೆಮ್ಮ ಇತರರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement