ಶ್ರಾವಣ ಸೋಮವಾರ: ಕುಮಾರಸ್ವಾಮಿ ದರ್ಶನ
ಸಂಡೂರು: ಶ್ರಾವಣ ಮಾಸದ ಮೊದಲನೇ ಸೋಮವಾರ ಇಲ್ಲಿನ ಇತಿಹಾಸ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಸಾವಿರಾರು ಭಕ್ತರು ಆಗಮಿಸಿ, ಪೂಜೆ ಸಲ್ಲಿಸಿದರು.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಅತಿ ಶೀತಲ ವಾತಾವರಣ ನಿರ್ಮಾಣವಾಗಿದೆ. ಆದರೂ ಬೆಳಗಿನ ಚಳಿ ಲೆಕ್ಕಿಸದೇ ಭಕ್ತರು ಪಾದಯಾತ್ರೆ ಮೂಲಕ ಕುಮಾರಸ್ವಾಮಿ ದರ್ಶನ ಪಡೆಯಲು ನಡೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶ್ರೀ ಕುಮಾರಸ್ವಾಮಿ ದೇವರಿಗೆ ಈ ಭಾಗದ ಜನರು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಈ ಹಿಂದೆ ಗಣಿ ಅಬ್ಬರಕ್ಕೆ ರಸ್ತೆ, ಪರಿಸರ ಹಾಳಾಗಿ ಕಲುಷಿತಗೊಂಡಿತ್ತು. ಆದರೆ ಈಗ ಅಬ್ಬರದ ಗಣಿಗಾರಿಕೆ ಇಲ್ಲವಾಗಿದೆ. ಜತೆಗೆ ಜನರ ಸುಗಮ ಸಂಚಾರಕ್ಕೆ ಯೋಗ್ಯವಾಗಿರುವ ರಸ್ತೆ ಇರುವುದು, ನೆಮ್ಮದಿ ತರುವ ಪರಿಸರ ನಿರ್ಮಾಣಗೊಂಡಿರುವುದು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಲು ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.