ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಲು ಆಗ್ರಹ
ಬಳ್ಳಾರಿ: ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ, ದೌರ್ಜನ್ಯ ನಿಯಂತ್ರಿಸಿ, ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೆಳಗಾವಿಯ ಯಳ್ಳೂರು ಗ್ರಾಮದಲ್ಲಿ ಮರಾಠಿ ಭಾಷೆಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸಲು ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದ್ದು, ಈ ಆದೇಶವನ್ನು ರಾಜ್ಯ ಪೊಲೀಸರು ಪಾಲಿಸಿ, ನಾಮಫಲಕಗಳನ್ನು ತೆರವುಗೊಳಿಸಿರುವುದು ಸರಿ. ಆದರೆ, ಎಂಇಎಸ್ ಕಾರ್ಯಕರ್ತರು ನಾಮಫಲಕಗಳನ್ನು ತೆರವುಗೊಳಿಸಲು ತೆರಳಿದ ಪೊಲೀಸರ ಮೇಲೆ ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವುದು ತೀವ್ರ ಖಂಡನೀಯ ಎಂದು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಹೊನ್ನಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ವಿ. ಶ್ರೀನಿವಾಸಲು, ನಗರಾಧ್ಯಕ್ಷ ಪ್ರಸಾದ್ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಶಾಸಕರಾಗಿದ್ದು, ಉಡಾಫೆ ಮಾತುಗಳನ್ನಾಡುತ್ತಿರುವ ಶಾಸಕ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲರನ್ನು ತಕ್ಷಣ ರಾಜ್ಯ ಸರ್ಕಾರವು ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರ ಹೆಚ್ಚಿನ ಭದ್ರತೆ ನೀಡಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಸೇನೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂಇಎಸ್ ಪುಂಡಾಟಿಕೆ ನಿಯಂತ್ರಿಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಕಾರ್ಯಕರ್ತರು ಇದ್ದರು.