ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುಗ್ಗೇನಹಳ್ಳಿ: ಸರ್ಕಾರಿ ಶಾಲೆಗೆ ಶಿಕ್ಷಕರ ನೇಮಿಸಿ

Lingaraj Badiger
Updated On : 30 Jul 2014, 10:36 am

ಹೊಸಪೇಟೆ: ತಾಲೂಕಿನ ಸುಗ್ಗೇನಹಳ್ಳಿ ಸ.ಹಿ.ಪ್ರಾ. ಶಾಲೆಗೆ ಅಗತ್ಯ ಶಿಕ್ಷಕರನ್ನು ನೇಮಿಸುವಂತೆ ಇಲ್ಲಿನ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಹೊಸಪೇಟೆ ತಾಲೂಕಿನ ಗಡಿ ಭಾಗದ ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗತ್ಯವಿರುವಷ್ಟು ಶಿಕ್ಷಕರು ಕಾರ್ಯನಿರ್ವಹಿಸುತ್ತಿಲ್ಲ. 160 ವಿದ್ಯಾರ್ಥಿಗಳಿಗೆ ಕೇವಲ 4 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ನಾಗರಾಜ ಚಿಂದಿ ಅವರನ್ನು ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ನಿಯೋಜಿಸಲಾಗಿದೆ. ಹಾಗಾಗಿ 1ರಿಂದ 8 ತರಗತಿವರಗೆ ಎಲ್ಲ ಮಕ್ಕಳಿಗೆ ಸರಿಯಾಗಿ ಪಠ್ಯ ಬೋಧನೆ ಸಾಧ್ಯವಾಗುತ್ತಿಲ್ಲ. ಅದರಲ್ಲಿ 8ನೇ ತರಗತಿಗೆ ಸಮರ್ಪಕ ಶಿಕ್ಷಕರು ಇಲ್ಲವಾದ್ದರಿಂದ ಆ ತರಗತಿಯ ಮಕ್ಕಳು ಪಕ್ಕದ 3 ಕಿ.ಮೀ. ದೂರದ ಶ್ರೀರಾಮ ರಂಗಾಪುರಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬೇಕಿದೆ. ಓದುವ ಶಾಲೆ ಸುಗ್ಗೇನಹಳ್ಳಿಯಲ್ಲಿ, ಆದರೆ, ಮಕ್ಕಳು ವಿದ್ಯಾಭ್ಯಾಸ ಕಲಿಯುವುದು ಶ್ರೀರಾಮ ರಂಗಾಪುರದಲ್ಲಿ. ಹೀಗಾಗಿ ಬಾಲಕರು ಹೇಗೋ ನಡೆದು, ಸೈಕಲ್ಲಿನಲ್ಲಿ ಅಲ್ಲಿನ ಶಾಲೆ ತಲುಪಿ ವಿದ್ಯಾಭ್ಯಾಸ ಮಾಡುತ್ತಿರುವುದು ಹೌದಾದರೂ ಬಾಲಕಿಯರು ಅಲ್ಲಿವರೆಗೆ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿನಿಯರೂ ಸೇರಿದಂತೆ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಹಾಗಾಗಿ ಹೆಣ್ಣು ಮಕ್ಕಳ ಪಾಲಕರು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಸಾಕ್ಷರತಾ ಯೋಜನೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. 2013-14 ಮತ್ತು 2014-15ನೇ ಅವಧಿಯಲ್ಲಿ ಈ ಶಾಲೆಗೆ ಒಂದು ದೌರ್ಭಾಗ್ಯ ಒದಗಿದೆ. ಶಾಲೆಗೆ ಕನಿಷ್ಠ 6 ಶಿಕ್ಷಕರು ಇರಬೇಕು. ಆದರೆ, ಶಿಕ್ಷಕರು ಕಡಿಮೆಯಿರುವುದರಿಂದ ಮಕ್ಕಳಲ್ಲಿ ವಿದ್ಯಾಭ್ಯಾಸದೆಡಗಿನ ಆಸಕ್ತಿಗಳು ಕಡಿಮೆಯಾಗುತ್ತಿವೆ. ಮಕ್ಕಳೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅನೇಕ ಬಾರಿ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ನೀಡಿದ್ದಾಗ್ಯೂ ಈವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಶೀಘ್ರ ಶಿಕ್ಷಕರನ್ನು ನಿಯೋಜಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿಯಾಗಬೇಕೆಂದು ಪ.ಯ. ಗಣೇಶ್, ಪಿ. ಅಂಜಿನಿ, ವಿ.ಬಿ. ಶ್ರೀನಿವಾಸ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿ. ಯರ್ರಿಸ್ವಾಮಿ, ಸದಸ್ಯರಾದ ಎನ್. ದುರುಗಪ್ಪ, ವಿ. ಹುಲಿಗೇಶ್ ಇತರರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement