ಜಾತಿ ಪ್ರಮಾಣಪತ್ರ ಕುರಿತಾಗಿ ವಾಗ್ವಾದ: ಗ್ರಾಮಸಭೆ ಮುಂದೂಡಿಕೆ
ಕಂಪ್ಲಿ: ಜಾತಿ ಪ್ರಮಾಣಪತ್ರ ವಿಷಯ ಕುರಿತಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದ ಘಟನೆ ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಪಂ ಗ್ರಾಮ ಸಭೆಯಲ್ಲಿ ಗುರುವಾರ ನಡೆಯಿತು.
ಗ್ರಾಮದ ಯುವ ಮುಖಂಡ ಜೆ. ಮಹೇಶ ಮಾತನಾಡಿ, ಮೆಟ್ರಿ ಗ್ರಾಮದಲ್ಲಿ ವಾಸವಿರುವ ದಾಸರ ಜನಾಂಗದವರು ಪರಿಶಿಷ್ಟ ಜಾತಿಗೆ ಸೇರಿಲ್ಲವೆಂದು ದಾವಣಗೆರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಸ್ಪಷ್ಟವಾಗಿದೆ. ಕಾರಣ ಪರಿಶಿಷ್ಟರಿಗೆ ಮೀಸಲಾಗಿರುವ ಮನೆಗಳನ್ನು ದಾಸರ ಜನಾಂಗಕ್ಕೆ ಹಂಚಿಕೆ ಮಾಡಬಾರದು ಎಂದು ಒತ್ತಾಯಿಸಿದರು.
ಈ ಹೇಳಿಕೆಯನ್ನು ಗ್ರಾ.ಪಂ.ಸದಸ್ಯ ಸಿ.ಡಿ. ಮಾರೆಣ್ಣ ವಿರೋಧಿಸಿ, ಮೆಟ್ರಿ ಗ್ರಾಮದಲ್ಲಿ ವಾಸವಿರುವ ದಾಸರು ಚನ್ನದಾಸರ ಜನಾಂಗಕ್ಕೆ ಸೇರಿದವರೆಂದು ಹೊಸಪೇಟೆ ತಹಸೀಲ್ದಾರ್ ಅಧಿಕೃತವಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿದ್ದಾರೆ. ಕಾರಣ ಪರಿಶಿಷ್ಟ ಜನಾಂಗಕ್ಕೆ ಮೀಸಲಾಗಿರುವ ಮನೆಗಳನ್ನು ಚನ್ನದಾಸರ ಜನಾಂಗಕ್ಕೂ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ಈ ವಿಷಯವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ಏರ್ಪಟ್ಟಿದ್ದರಿಂದ ಗ್ರಾಪಂ ಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ ಮಾತನಾಡಿ, ಅಧಿಕಾರಿಗಳ ಸಲಹೆ ಪಡೆದು ಮನೆಗಳ ಹಂಚಿಕೆ ಮಾಡಲಾಗುವುದು ಮತ್ತು ಮುಂದಿನ ಗ್ರಾಮ ಸಭೆ ದಿನಾಂಕ ಪ್ರಕಟಿಸಲಾಗುವುದೆಂದು ಹೇಳಿ, ಸಭೆ ಮುಂದೂಡಿದರು.