ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಸ್ತೆಗಳೇ ಗ್ರಾಮೀಣ ಆಟೋಗಳ ನಿಲ್ದಾಣ

Mainashree
Updated On : 1 Aug 2014, 10:12 am

ಕೊಟ್ಟೂರು: ಪಟ್ಟಣದ ಜನಸಂದಣಿ ಇರುವ ಸ್ಥಳಗಳು, ರಸ್ತೆಗಳೆ ಗ್ರಾಮಾಂತರ ಪ್ರದೇಶಕ್ಕೆ ಸಂಚರಿಸುವ ಆಟೋಗಳ ನಿಲ್ದಾಣವಾಗಿವೆ.
ಈ ಆಟೋಗಳಿಗೆ ನಿಂತಲ್ಲೇ ನಿಲ್ದಾಣ ಎಂಬಂತಾಗಿದೆ. ಇದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ ಎಂಬ ಧೋರಣೆ ಆಟೋ ಚಾಲಕರದ್ದು.
ಆಟೋ ನಿಲ್ದಾಣಕ್ಕಾಗಿ ಸ್ಥಳೀಯ ಆಡಳಿತ ಬಸ್ ನಿಲ್ದಾಣ, ಉಜ್ಜಿನ ವೃತ್ತದ ಬಳಿ ಆಟೋ ಸ್ಟಾಂಡ್ ಎಂದು ಪರಿಗಣಿಸಿ ಜಾಗೆ ಮೀಸಲಿಟ್ಟಿದ್ದಾರೆ.
ಆದರೆ ಗ್ರಾಮಾಂತರ ಪ್ರದೇಶಕ್ಕೆ ಸಂಚರಿಸುವ ಆಟೋಗಳ ಮಾಲೀಕರು ಸ್ಥಳೀಯ ಆಟೋ ಚಾಲಕರೊಂದಿಗೆ ಕೂಡಿಕೊಳ್ಳಲು ಮುಂದಾಗದೆ ತಮ್ಮ ಮನಬಂದಂತೆ ಎಲ್ಲೆಂದರಲ್ಲಿ ಆಟೋ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ.
ಪಟ್ಟಣದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಆಟೋಗಳು ಇಲ್ಲಿಯ ಅಕ್ಕ ಮಹಾದೇವಿ ದೇವಸ್ಥಾನ ರಸ್ತೆ, ಸಾಮಿಲ್ ಬಳಿ, ಮತ್ತಿಹಳ್ಳಿ ಹೋಟೆಲ್ ಮುಂಭಾಗದಲ್ಲಿ ಎಗ್ಗಿಲ್ಲದೇ ನಿರಂತರವಾಗಿ ಆಟೋಗಳನ್ನು ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ.
ಈ ರಸ್ತೆಗಳು ಕಿರಿದಾಗಿವೆ. ಆದರೂ ಇವುಗಳ ಪರಿವೇ ಇಲ್ಲದೇ ಈ ಬಗೆಯ ಆಟೋ ಚಾಲಕರು ಆಟೋ ನಿಲ್ಲಿಸುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಜನ ಜೀವ ಹಿಡಿದುಕೊಂಡೇ ಸಾಗಬೇಕಿದೆ. ಪ್ರಯಾಣಿಕರನ್ನು ಹುಡುಕಿಕೊಂಡು ಅವರಿರುವ ಸ್ಥಳಗಳಲ್ಲಿಯೇ ಆಟೋಗಳನ್ನು ನಿಲ್ಲಿಸುವ ಈ ಆಟೋ ಚಾಲಕರು ಅಧಿಕ ಸಂಖ್ಯೆಯಲ್ಲಿ ಜನರನ್ನು ತುಂಬಿಸಿಕೊಂಡು ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಸಂಚಾರಿ ನಿಯಮ ಇವರಿಗೆ ಬೇಕಾಗಿಯೇ ಇಲ್ಲ.
ಈ ಕುರಿತು ಕೆಲವರು ಆಟೋ ಚಾಲಕರನ್ನು ಕೇಳಿದರೆ, ಹಲವು ದಿನಗಳಿಂದ ಇಲ್ಲಿಯೇ ಆಟೋಗಳನ್ನು ನಿಲ್ಲಿಸುತ್ತೇವೆ. ನಿಮ್ಮದೇನು ತಕರಾರು, ಎದುರಿನ ವಾಹನ ಅಥವಾ ಅಕ್ಕಪಕ್ಕದ ವಾಹನಗಳಿಗೆ ಮುಂದೆ ಹೋಗಲು ಅನುವು ಮಾಡಿಕೊಡುತ್ತೇವೆ. ನಿಮ್ಮದೇನು ಕಿರಿ ಕಿರಿ ಎಂಬ ಉದ್ಧಟತನದ ಉತ್ತರ ನೀಡುತ್ತಿದ್ದಾರೆ.
ಇನ್ನಾದರೂ ಗ್ರಾಮೀಣ ಪ್ರದೇಶದ ಆಟೋಗಳಿಗೆ ಕಡಿವಾಣ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement