ಸೀಮೆ ಎಣ್ಣೆ ವಿತರಣೆ ರದ್ದು: ಖಂಡನೆ
ಸಿರುಗುಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸೀಮೆ ಎಣ್ಣೆ ವಿತರಕರಿಂದ ಸೀಮೆ ಎಣ್ಣೆ ವಿತರಣೆ ರದ್ದುಗೊಳಿಸಿ ನ್ಯಾಯಬೆಲೆ ಅಂಗಡಿಕಾರರಿಗೆ ವಹಿಸಲು ಆದೇಶಿಸಿರುವುದನ್ನು ತಾಲೂಕು ಸೀಮೆ ಎಣ್ಣೆ ವಿತರಕರ ಸಂಘದ ನೂತನ ಅಧ್ಯಕ್ಷ ಎಂ. ವಿರುಪನಗೌಡ ತೀವ್ರವಾಗಿ ಖಂಡಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಈಚೆಗೆ ನಡೆದ ತಾಲೂಕು ಸೀಮೆಎಣ್ಣೆ ವಿತರಕರ ಸಂಘದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ 123 ಸರ್ಕಾರಿ ಪಡಿತರ ಸೀಮೆಎಣ್ಣೆ ವಿತರಕರಿದ್ದಾರೆ. ಇವರು ಹಲವಾರು ವರ್ಷಗಳಿಂದ ಸೀಮೆಎಣ್ಣೆ ವಿತರಿಸಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದ ಈ ಆದೇಶದಿಂದ ವಿತರಕರಿಗೆ ಜೀವನ ನಡೆಸಲು ತೀವ್ರ ತೊಂದರೆಯಾಗುತ್ತದೆ. ವಿತರಕರಿಗೆ ಸೀಮೆಎಣ್ಣೆ ವಿತರಿಸಲು ಅವಕಾಶ ನೀಡುವ ಸಲುವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗುವುದು. ಮುಂದಿನ ದಿನಗಳಲ್ಲಿ ಸಂಘವನ್ನು ನೋಂದಣಿ ಮಾಡಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸಿರುಗುಪ್ಪ ತಾಲೂಕು ಸೀಮೆ ಎಣ್ಣೆ ವಿತರಕರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ. ವಿರೂಪನಗೌಡ ಹಾಗಲೂರು, ಉಪಾಧ್ಯಕ್ಷರಾಗಿ ಎಸ್. ನಿಂಗಪ್ಪ, ಇ.ಆರ್. ಯಲ್ಲಪ್ಪ. ಜಿ. ಬಸವನಗೌಡ, ಆರ್. ಆಶೋಕ ಕುಮಾರ್, ಕಾರ್ಯದರ್ಶಿಯಾಗಿ ಬಿ. ಸಣ್ಣ ರಾಮಯ್ಯ, ಜಂಟಿ ಕಾರ್ಯದರ್ಶಿಯಾಗಿ ಎಚ್. ರುದ್ರಗೌಡ, ಖಜಾಂಚಿಯಾಗಿ ಬಿ. ಕೃಷ್ಣಮೂರ್ತಿ, ಕಾನೂನು ಸಲಹೆಗಾರರಾಗಿ ಎ. ಶಿವರುದ್ರಗೌಡ, ಸದಸ್ಯರಾಗಿ ಶೇಷಾವಲಿ, ಕೆ. ರಾಮನಗೌಡ. ಜೆ. ಕೊಟ್ರಗೌಡ, ಟಿ. ಸತ್ಯನಾರಾಯಣ, ಶೇಕ್ಷಾವಲಿ, ಸಿದ್ಧರಾಮನಗೌಡ, ಅರ್. ಕೃಷ್ಣಸಿಂಗ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸದೃಢ ದೇಶಕ್ಕೆ ಯುವಶಕ್ತಿ ಅಗತ್ಯ
ಬಳ್ಳಾರಿ: ದೇಶವನ್ನು ಸದೃಢವನ್ನಾಗಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಲ್ ಜೆ. ವಿನೋದ್ ತಿಳಿಸಿದರು. ನಗರದ ಎಫ್.ಪಿ.ಎ.ಐ.ನಲ್ಲಿ ನಡೆದ ಸಂಸ್ಥೆಯ 65ನೇ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಫ್.ಪಿ.ಎ.ಐ. ಸದಸ್ಯ ಟಿ.ಜಿ. ವಿಠಲ್, ಅಧ್ಯಕ್ಷತೆ ವಹಿಸಿದ್ದ ಎಫ್.ಪಿ.ಎ.ಐ. ಅಧ್ಯಕ್ಷ ಎಸ್. ವಿಜಯ ಸಿಂಹ, ವಿ.ಕೆ. ನರಸಿಂಹ ಮೂರ್ತಿ ಮಾತನಾಡಿದರು.