ರವೀಂದ್ರನಾಥ್ ಪ್ರಕರಣ ಸಿಬಿಐಗೆ
ಬಳ್ಳಾರಿ: ಕೆಎಸ್‌ಆರ್‌ಪಿ ಎಡಿಜಿಪಿ ಡಾ. ರವೀಂದ್ರನಾಥ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮಹಿಳೆಯ ಫೋಟೋ ತೆಗೆದಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಎಡಿಜಿಪಿ ರವೀಂದ್ರನಾಥ್‌ರ ಪ್ರಕರಣವನ್ನು ಈ ರೀತಿ ಬೀದಿ ರಂಪಾಟ ಮಾಡುವುದು ಖಂಡನೀಯವಾಗಿದೆ. ದಕ್ಷ ಅಧಿಕಾರಿಯಾಗಿದ್ದರೂ, ದಲಿತ ಎಂಬ ಒಂದೇ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಿ, ಉನ್ನತ ಹುದ್ದೆಯಲ್ಲಿರುವ ದಲಿತ ಅಧಿಕಾರಿಗಳನ್ನು ಹತ್ತಿಕ್ಕುವ ತಂತ್ರ ಇದಾಗಿದೆ. ರಾಜ್ಯಾದ್ಯಂತ ಎಲ್ಲ ಮಾಧ್ಯಮಗಳಲ್ಲೂ ಈ ಪ್ರಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಜನತೆ ತಲೆತಗ್ಗಿಸುವಂತೆ ಮಾಡಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಕಪ್ಪಗಲ್ ಓಂಕಾರಪ್ಪ ಖೇದ ವ್ಯಕ್ತಪಡಿಸಿದ್ದಾರೆ.
ಡಾ. ರವಿಂದ್ರನಾಥ್‌ರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡದೆ ಈಗಿರುವ ಹುದ್ದೆಯಲ್ಲೇ ಮುಂದುವರಿಸಬೇಕು. ಪ್ರಕರಣವನ್ನು ಸಿಐಡಿಗೆ ನೀಡುವ ಬದಲು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಮಿತಿಯ ಹಿರಿಯ ಮುಖಂಡರಾದ ಡಿ.ಎಚ್. ಹನುಮೇಶಪ್ಪ, ಎನ್.ಡಿ. ವೆಂಕಮ್ಮ, ರಾಜ್ಯ ಸಮಿತಿ ಸದಸ್ಯರಾದ ಸಿ. ಈಶ್ವರ್‌ರಾವ್, ಶ್ರೀನಿವಾಸಲು, ಶಿವಕುಮಾರ್, ಕುಮಾರ್, ರಾಮಾನಾಯ್ಕ್, ಜಿಂದಾಲ್ ತಿಪ್ಪೇಸ್ವಾಮಿ, ಎಚ್. ಬಸವರಾಜ, ವೆಂಕಟೇಶ್, ಯೋಗರಾಜ್, ಮಲ್ಲಿಕಾರ್ಜುನ, ರಾಂಬಾಬು, ಈಶಣ್ಣ, ವಿಜಯ್, ಕಿಟ್ಟಿ ಇದ್ದರು.