ಮಳೆ ನೀರಿಗೆ ಕೊಚ್ಚಿ ಹೋಯ್ತು ಬದುಕು
ಹೂವಿನಹಡಗಲಿ: ನಡುರಾತ್ರಿ ನಿದ್ದೆಗೆ ಜಾರಿದ್ದ ಸಮಯದಲ್ಲಿ ಸುರಿದ ಭಾರಿ ಮಳೆಗೆ ನೀರು ಮನೆಯೊಳಗೆ ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲಿ ಹೋದವು. ರಕ್ಷಣೆ ಮಾಡಲು ಆಗದೇ ಮನೆಯಲ್ಲಿ ಸಣ್ಣ ಮಕ್ಕಳು ಮರಿ ನೀರು ಪಾಲಾದಾವು ಎಂದು ಹೆದರಿ ನಡು ನೀರಿನಲ್ಲಿ ಕೈಯಲ್ಲಿ ಹಿಡಿದುಕೊಂಡು ಇದ್ವಿ ಸಾರ್.
ಹೀಗೆಂದು ತಮಗಾಗಿರುವ ನೋವನ್ನು ತೋಡಿಕೊಂಡಿದ್ದು, ತಾಲೂಕಿನ ನಾಗತಿ ಬಸಾಪುರ ಗ್ರಾಮದ ಫರೀದಾಬಿ.
ಹೌದು, ಸೋಮವಾರ ನಡುರಾತ್ರಿ ಸುರಿದ ಭಾರಿ ಮಳೆಗೆ ನೀರಿನಲ್ಲಿ ಬದುಕೆ ತೇಲಿ ಹೋಗಿದೆ. ನಾಗತಿ ಬಸಾಪುರದ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಗೋಡೆಗಳೆಲ್ಲಾ ನೆನೆದು ಮನೆಗಳು ಕುಸಿಯುವ ಅಪಾಯ ಎದುರಾಗಿದೆ. 15-20 ಮನೆಗಳು ಭಾಗಶಃ ಬಿದ್ದಿವೆ. ಮನೆ ನೀರಿಗೆ ಎಮ್ಮೆ ಕರು ನೀರಿಗೆ ಕೊಚ್ಚಿ ಹೋಗಿದೆ.
ರಾತ್ರಿ ಬಂದ ಮಳೆಯ ನೀರು ಮನೆಯೊಳಗೆ ನುಗ್ಗಿದಾಗ ವಸ್ತುಗಳು ಕಣ್ಮುಂದು ತೇಲಿ ಹೋದರೂ ಹಿಡಿದುಕೊಳ್ಳುವಷ್ಟರಲ್ಲೇ ಮನೆಯಲ್ಲಿನ ಸಣ್ಣ ಮಕ್ಕಳ ನೀರಿಗೆ ಹೆದರಿ ಕೂಗಾಟ ಚೀರಾಟದಿಂದ ಕೈಯಲ್ಲಿ ಹಿಡಿದುಕೊಂಡು ಇಡೀ ರಾತ್ರಿ ಕಳೆಯುವ ಪರಿಸ್ಥಿತಿ ಬಂದೈತಿ. ಮನೆಯಲ್ಲಿನ ಕೆಲ ಬೆಲೆ ಬಾಳುವ ವಸ್ತುಗಳು ನೀರು ಪಾಲಾಗಿವೆ ಎನ್ನುತ್ತಾರೆ ಫರೀದಾಬಿ.