ಮಳೆ ನೀರು ಮುಕ್ತ ವಡ್ಡರಗುಂಡಿ
ಹಗರಿಬೊಮ್ಮನಹಳ್ಳಿ: ವಡ್ಡರಗುಂಡಿ ಎಂಬ ವಿಲಕ್ಷಣ ಹೆಸರಿನ ಈ ಪ್ರದೇಶ ಪಟ್ಟಣದ ಬಹು ದೊಡ್ಡ ತಗ್ಗುಪ್ರದೇಶ. ಮಳೆಗಾಲ ಆರಂಭವಾದರೆ ಪಟ್ಟಣದ ಅರ್ಧಭಾಗದ ಮಳೆ ನೀರು ನಿಲ್ಲುವುದು ಕೆಚ್ಚಿನ ಬಂಡಿ ರಸ್ತೆಯಲ್ಲಿರುವ ಈ ಗುಂಡಿಯಲ್ಲಿ. ಈ ಬಾರಿ ಪಂಚಾಯತ್ ರಾಜ್ ಇಲಾಖೆ ಚರಂಡಿ ನಿರ್ಮಾಣ ಕಾರ್ಯ ಆರಂಭಿಸಿದ್ದು, ಜಲಬಾಧೆಯಿಂದ ಅಲ್ಲಿನ ನಿವಾಸಿಗಳು ಮುಕ್ತರಾಗಲಿದ್ದಾರೆ.
ಮೂರುವರೆ ದಶಕಗಳಿಂದಲೂ ಈ ತಗ್ಗು ಪ್ರದೇಶ ಪ್ರತಿ ಮಳೆಗಾಲದಲ್ಲಿ ನೀರಿನ ಬಾಧೆಗೆ ತುತ್ತಾಗುತ್ತಲೆ ಇದೆ. ಚರಂಡಿ ನಿರ್ಮಾಣ ಮಾಡಿ ನಮ್ಮನ್ನು ಮಳೆ ನೀರಿನಿಂದ ರಕ್ಷಿಸಿ ಎಂದು ಇಲ್ಲಿನ ನಿವಾಸಿಗಳು, ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಲೆ ಇದ್ದಾರೆ. ಆದರೆ ಚರಂಡಿ ನಿರ್ಮಾಣಕ್ಕೆ ಅಗತ್ಯವಿರುವ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು, ಚರಂಡಿ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಲೆ ಬರುತ್ತಿದ್ದಾರೆ. ಹೀಗಾಗಿ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಆದರೆ, ಈಗ ಚರಂಡಿ ನಿರ್ಮಾಣಕ್ಕೆ ಅಡ್ಡವಾಗಿದ್ದ ಸರ್ಕಾರಿ ಭೂಮಿಯ ಖಾಸಗಿಯವರ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಇಲ್ಲಿನ ಪಂರಾಇ ಇಲಾಖೆ ಆರಂಭಿಸಿದೆ. ತೆರವುಗೊಂಡ ಸ್ಥಳದಲ್ಲಿ ಚರಂಡಿ ನಿರ್ಮಾಣ ಕಾರ್ಯವೂ ಆರಂಭಗೊಂಡಿದೆ. ಹೀಗಾಗಿ ಯಾವುದೆ ಭಯ, ನೆಮ್ಮದಿಯಿಂದ ಈ ಸಲದ ಮಳೆಗಾಲವನ್ನು ಗುಂಡಿಯ ನಿವಾಸಿಗಳು ಎದುರುಗೊಳ್ಳಬಹುದು.
ಪ್ರತಿ ಮಳೆಗಾಲದ ವೇಳೆಯಲ್ಲಿ ಪಟ್ಟಣದ ರಾಮನಗರ ರೈತರ ಓಣಿ, ರಥಬೀದಿ, ಮಿಲ್ಟ್ರಿ ಬಯಲು, ಸೋನಿಯಾಗಾಂಧಿ ನಗರ, ರಾಷ್ಟ್ರೋತ್ಥಾನ ಶಾಲೆ ಪ್ರದೇಶ, ಅರಳಿಹಳ್ಳಿ, ಕುರದಗಡ್ಡಿ, ಹೌಸಿಂಗ್ ಬೋರ್ಡ್ ಕಾಲೋನಿ, ಪಾದಗಟ್ಟಿರಸ್ತೆ ಸೇರಿದಂತೆ ವಿವಿಧ ಎತ್ತರ ಪ್ರದೇಶಗಳಿಂದ ಬರುವ ಮಳೆ ನೀರು ಇಲ್ಲಿನ ನಿವಾಸಿಗಳನ್ನು ಸಾಕಷ್ಟು ನಿದ್ದೆಗೆಡಿಸಿದ್ದುಂಟು.
ಹೊಸಪೇಟೆ ರಸ್ತೆಯ ಬಳಿಯ ಮಾಲ್ವಿ ಡ್ಯಾಂ ನೀರಾವರಿ ಕಾಲುವೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸರ್ಕಾರಕ್ಕೆ ಸೇರಿದ ಸ್ಥಳದಲ್ಲಿ ನೂರು ವರ್ಷಗಳ ಹಿಂದೆ ನಿರ್ಮಿಸಿದ ದೊಡ್ಡದಾದ ಗೋಕಟ್ಟೆ ಇದೆ. ಈ ಕಟ್ಟೆಯ ಬಳಿ ಚರಂಡಿ ನಿರ್ಮಿಸಿದರೆ ಮಳೆ ನೀರು ಸುಗಮವಾಗಿ ಹರಿದು ಹೋಗಿ ಹಗರಿಹಳ್ಳವನ್ನು ಸೇರುತ್ತದೆ. ಆದರೆ ಕೆಲವರು ಈ ಕಟ್ಟೆಯನ್ನು ಒತ್ತುವರಿ ಮಾಡಿಕೊಂಡು ಮಳೆಯ ನೀರು ಹರಿಯಲು, ಚರಂಡಿ ನಿರ್ಮಿಸಲು ಸತತವಾಗಿ ಅಡ್ಡಿಪಡಿಸುತ್ತಿದ್ದರು. ಹೀಗಾಗಿ ಚರಂಡಿ ನಿರ್ಮಾಣ ಸ್ಥಳಿಯಾಡಳಿತಕ್ಕೆ ಸವಾಲ್ ಆಗಿ ಪರಿಣಮಿಸಿತ್ತು. ಮೂರು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆ ನೀರು ಮನೆಗಳಿಗೆ ನುಗಿದ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಕ್ಷೇತ್ರದ ಶಾಸಕ ಎಸ್. ಭೀಮಾನಾಯ್ಕ ಅವರನ್ನು ಮುತ್ತಿಕೊಂಡಿದ್ದ ಇಲ್ಲಿನ ನಿವಾಸಿಗಳು ಶಾಶ್ವತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದರು. ಆಡಳಿತ ಅಕ್ರಮ ಒತ್ತುವರಿ ತೆರವಿಗೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಚರಂಡಿ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿತು.