ಮೂಲ ಸೌಲಭ್ಯಕ್ಕಾಗಿ ಸಿಪಿಐಎಂ ರಸ್ತೆ ತಡೆ
ಹೊಸಪೇಟೆ: ನಗರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಸಿಪಿಐಎಂ ತಾಲೂಕು ಕಾರ್ಯಕರ್ತರು ಶುಕ್ರವಾರ ನಗರದ ಬಸ್ ಡಿಪೋ ಬಳಿ ರಸ್ತೆ ತಡೆ ನಡೆಸಿದರು. ಸಿಪಿಐಎಂ ಮುಖಂಡರಾದ ಕೆ. ನಾಗರತ್ನಮ್ಮ ಮಾತನಾಡಿ, ನಗರದ ಎಲ್ಲ ಸ್ಲಂ, ಬಡಾವಣೆ ರಸ್ತೆಗಳು ಹದಗೆಟ್ಟಿವೆ. ಬೀದಿ ದೀಪಗಳಿಲ್ಲ. ನಗರಸಭೆಗೆ ಚುನಾಯಿತ ಮಂಡಳಿ ಬಂದು ವರ್ಷವಾದರೂ ನಗರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ತಕ್ಷಣವೇ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ಕೈಗೊಂಡು ಸುಂದರ ನಗರವಾಗಿ ರೂಪಿಸಿ ಎಂದು ಒತ್ತಾಯಿಸಿದರು.
ನಗರದ ಬಸ್ ಡಿಪೋದಿಂದ ಎಂ.ಪಿ. ಪ್ರಕಾಶ್ ನಗರಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಒಳಚರಂಡಿಗಾಗಿ ರಸ್ತೆ ಅಗೆದಿದ್ದು, ಕೆಲಸ ಪೂರ್ಣಗೊಳಿಸಿಲ್ಲ. ಚರಂಡಿಯೊಳಗೆ ಕುಡಿಯುವ ನೀರಿನ ಪೈಪ್ ಸೇರಿ ಹೋಗಿವೆ. ಈ ರಸ್ತೆ ಕೂಡಲೇ ದುರಸ್ತಿ ಮಾಡಿ. ರಸ್ತೆ ಬದಿ ಚರಂಡಿ ವ್ಯವಸ್ಥೆ ಮಾಡಿ. ಎರಡು ಸೇತುವೆ ದುರಸ್ತಿ ಮಾಡಿ. ಹಳ್ಳ ಸ್ವಚ್ಛಗೊಳಿಸಬೇಕು. ವಿದ್ಯುತ್ ಕಂಬಗಳ ಅಳವಡಿಕೆ, ಬಲ್ಬ್ ವ್ಯವಸ್ಥೆಗೊಳಿಸಬೇಕು. ನಗರದ ಶೌಚಾಲಯಗಳ ನಿರ್ಮಾಣ, ಇದ್ದ ಶೌಚಾಲಯಗಳನ್ನು ದುರಸ್ತಿಗೊಳಿಸಬೇಕು. ಈ ಭಾಗದಲ್ಲಿ ಕಿರು ಉದ್ಯಾನ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು. ಸಿಪಿಐಎಂ ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ, ಎ. ಕರುಣಾನಿಧಿ, ಎಂ. ಗೋಪಾಲ್, ಬಿ. ಮಹೇಶ್, ಕೆ.ಎಂ. ಸಂತೋಷ್, ಕೆ. ರಮೇಶ್, ವಸಂತ ಕಲಾಲ, ಯಲ್ಲಾಲಿಂಗ, ಸಿದ್ದಲಿಂಗೇಶ್, ಜಮೀರ್, ರುದ್ರಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೋರಾಟಕ್ಕೆ ಎಸ್‌ಎಫ್‌ಐ, ಡಿವೈಎಫ್‌ಐ, ಆಟೋ ಚಾಲಕರ ಸಂಘ ಸೇರಿದಂತೆ ಇತರ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದವು.