ಸ್ಟಾಕ್ಯಾರ್ಡ್ನಲ್ಲೇ ಮರಳು ಲೂಟಿ
ತುಂಗಭದ್ರಾ ನದಿ ತೀರದ ಮರಳನ್ನು ಸಂಗ್ರಹ ಮಾಡಲು ನಿರ್ಮಾಣ ಮಾಡಿರುವ ಸರ್ಕಾರಿ ಸ್ಟಾಕ್ಯಾರ್ಡ್ನಲ್ಲೇ ಮರಳು ಲೂಟಿಯಾಗುತ್ತಿದೆ. ಲಾರಿಗಳು ಸಾಮರ್ಥ್ಯ ಮೀರಿ ಸಾಗಾಣಿಕೆ ಮಾಡುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಗಮನಹರಿಸುತ್ತಿಲ್ಲ.
ಹೂವಿನಹಡಗಲಿ: ತುಂಗಭದ್ರಾ ನದಿ ತೀರದ ಮರಳನ್ನು ಸಂಗ್ರಹ ಮಾಡಲು ನಿರ್ಮಾಣ ಮಾಡಿರುವ ಸರ್ಕಾರಿ ಸ್ಟಾಕ್ಯಾರ್ಡ್ನಲ್ಲೇ ಮರಳು ಲೂಟಿಯಾಗುತ್ತಿದೆ. ಲಾರಿಗಳು ಸಾಮರ್ಥ್ಯ ಮೀರಿ ಸಾಗಾಣಿಕೆ ಮಾಡುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ತಾಲೂಕಿನ ತುಂಗಭದ್ರಾ ನದಿ ತೀರದ ನವಲಿ-ಹೊನ್ನೂರು ಗ್ರಾಮಗಳ 6 ಮರಳಿನ ಬ್ಲಾಕ್ಗಳು ಈಗಾಗಲೇ ಟೆಂಡರ್ ಆಗಿದ್ದು, ಮರಳು ಸಂಗ್ರಹ ಮಾಡಲಾಗಿತ್ತು. ಕಳೆದೊಂದು ವಾರದಿಂದ ಮರಳು ಸಂಗ್ರಹ ಹಾಗೂ ಮರಳು ಸಾಗಾಣಿಕೆಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಮರಳಿನ ಬೇಡಿಕೆ ಹೆಚ್ಚಾಗುತ್ತಿದೆ.
ಸದ್ಯ ಸರ್ಕಾರಿ ಸ್ಟಾಕ್ಯಾರ್ಡ್ನಲ್ಲಿ ಸಂಗ್ರಹವಿರುವ ಮರಳು ಸಾಗಾಣಿಕೆಗೆ ಲೋಕೋಪಯೋಗಿ ಇಲಾಖೆಯು ಪಾಸ್ಗಳನ್ನು ವಿತರಣೆ ಮಾಡುತ್ತಿದೆ. ಪಾಸ್ ವಿತರಣೆ ಸಂದರ್ಭದಲ್ಲಿ ಮರಳು ತುಂಬುವ ಲಾರಿಗಳನ್ನು ಕಚೇರಿ ಆವರಣದಲ್ಲಿ ಅಳತೆ ಮಾಡಿ ಇಂತಿಷ್ಟು ಕ್ಯೂಬಿಕ್ ಮೀಟರ್ ಮರಳು ತುಂಬಬೇಕು. ಅದಕ್ಕೆ ಅನುಗುಣವಾಗಿ ಸರ್ಕಾರದ ಆಕೌಂಟ್ನಡಿ ಡಿಡಿ ಹಣ ತುಂಬಿದ ನಂತರದಲ್ಲಿ ಸರ್ಕಾರಿ ಸ್ಟಾಕ್ಯಾರ್ಡ್ನಲ್ಲಿ ಮರಳು ತುಂಬಲು ಪರವಾನಗಿ ನೀಡಲಾಗುತ್ತಿದೆ.
ಆದರೆ, ಲೋಕೋಪಯೋಗಿ ಇಲಾಖೆ ಪರವಾನಗಿ ಪಾಸ್ಗಳನ್ನು ಸರ್ಕಾರಿ ಸ್ಟಾಕ್ಯಾರ್ಡ್ಗೆ ನಿಯೋಜಿಸಿರುವ ಇಲಾಖೆ ಸಿಬ್ಬಂದಿ ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿವೆ. ಸ್ಟಾಕ್ಯಾರ್ಡ್ನಲ್ಲಿ ಲಾರಿಗಳಿಗೆ ಅಳತೆಗೆ ತಕ್ಕಂತೆ ಮರಳು ತುಂಬದೇ ಸಾಗಾಣಿಕೆಯ ಸಾಮರ್ಥ್ಯ ಮೀರಿ ಮರಳು ತುಂಬುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿ ಬಿಟ್ಟದೆ.
ಸರ್ಕಾರಿ ಸ್ಟಾಕ್ಯಾರ್ಡ್ನಲ್ಲಿ ನಡೆಯುತ್ತಿರುವ ಕೆಲವು ಅಕ್ರಮ ಅವ್ಯವಹಾರಗಳನ್ನು ಪತ್ತೆ ಹಚ್ಚಲು ಇಲಾಖೆ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಕೆಟ್ಟು 2-3 ತಿಂಗಳು ಕಳೆದಿವೆ. ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಸ್ಟಾಕ್ಯಾರ್ಡ್ನಲ್ಲಿ ಅಕ್ರಮ ನಡೆಯಲು ಅನುಕೂಲಕರ ವಾತವರಣ ಸೃಷ್ಟಿಯಾಗುತ್ತಿದೆ ಎಂಬ ದೂರುಗಳು ಬರುತ್ತಿವೆ.
ಅಧಿಕಾರಿಗಳ ಮೇಲೆ ಅನುಮಾನ
ಸಾಮರ್ಥ್ಯ ಮೀರಿ ಮರಳು ಸಾಗಾಣಿಕೆ ಮಾಡುವವರ ವಿರುದ್ಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳದಿರುವುದರಿಂದ ಸಾಕಷ್ಟು ಅನುಮಾನಗಳು ಮೂಡಿವೆ. ಮರಳು ತುಂಬಿರುವ ಲಾರಿಗಳು ರಸ್ತೆ ಮೇಲೆ ಮರಳು ಜರಿದು ಬಿದ್ದಿರುವುದರಿಂದ ಸಂಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಗಿದೆ. ಟಾಸ್ಕ್ಫೋರ್ಸ್ ಸಮಿತಿಯಲ್ಲಿ ಸದಸ್ಯರಾಗಿದ್ದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಒಮ್ಮೆಯೂ ಇತ್ತ ತಿರುಗಿ ನೋಡಿಲ್ಲ. ಅಧಿಕಾರಿಗಳ ಈ ರೀತಿಯ ನಿರ್ಲಕ್ಷ್ಯದಿಂದ ಸರ್ಕಾರದ ಮರಳಿನ ಸಂಪತ್ತು ನಿತ್ಯ ಲೂಟಿಯಾಗುತ್ತಿದೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಂಡು ಅಕ್ರಮಗಳನ್ನು ತಡೆಯುವರೇ ಕಾಯ್ದು ನೋಡಬೇಕು. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ದೂರವಾಣಿ ಮೂಲಕ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಇಲಾಖೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವಿದೆ.
ರಾಮಸಾಗರದಲ್ಲಿ ಸರಣಿ ಕಳ್ಳತನ
ಕಂಪ್ಲಿ: ಇಲ್ಲಿಗೆ ಸಮೀಪದ ರಾಮಸಾಗರ ಗ್ರಾಮದಲ್ಲಿ ಮೂರು ಮನೆ ಸರಣಿ ಕಳ್ಳತನ ನಡೆದಿದ್ದು, ಕಳ್ಳರು ಲಕ್ಷಾಂತರ ರುಪಾಯಿ ಚಿನ್ನಾಭರಣಗಳು, ಬೆಳ್ಳಿ ಸಾಮಾನುಗಳು ಸೇರಿದಂತೆ ನಗದು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ಗ್ರಾಮದ 4ನೇ ವಾರ್ಡ್ನ ರಾಗಿ ಶಿವಕುಮಾರ್ ಎನ್ನುವವರ ಮನೆಯ ಬೀಗ ಮುರಿದಿರುವ ಕಳ್ಳರು ಮನೆಯೊಳಗೆ ನುಗ್ಗಿ ಅಲ್ಲಿರುವ ಗೋದ್ರೇಜ್ ಮತ್ತು ಅಲ್ಮೇರಾಗಳ ಬಾಗಿಲುಗಳನ್ನು ತೆರೆದು ಅದರಲ್ಲಿದ್ದ ರು. 47 ಸಾವಿರ ನಗದು, 12 ತೊಲೆ ಚಿನ್ನಾಭರಣಗಳು ಮತ್ತು ಬೆಳ್ಳಿಯ ಸಾಮಾನುಗಳ ಜತೆ ಪರಾರಿಯಾಗಿದ್ದಾರೆ. ಮನೆ ಮಾಲೀಕರಾದ ರಾಗಿ ಶಿವಕುಮಾರ್ ತಮ್ಮ ಕುಟುಂಬದವರೊಂದಿಗೆ ಸಹೋದರರ ಮಕ್ಕಳ ಮದುವೆಗೆಂದು ಕಂಪ್ಲಿಗೆ ಹೋಗಿದ್ದು, ಕಳ್ಳರು ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಇದೇ ರೀತಿ ಗ್ರಾಮದ 1ನೇ ವಾರ್ಡ್ ನಿವಾಸಿ ತರಕಾರಿ ಮತ್ತು ಹಾಲು ಮಾರಾಟ ಮಾಡುವ ಸಾಧಕ್ ಅಲಿ ಎನ್ನುವವರ ಮನೆಯ ಬೀಗ ಮುರಿದು ಮನೆಯ ಗೋದ್ರೇಜ್ನಲ್ಲಿದ್ದ ರು. 9 ಸಾವಿರ ನಗದು ಮತ್ತು 35 ತೊಲೆ ಬೆಳ್ಳಿ ಆಭರಣ ಹಾಗೂ ಸಣ್ಣ ಪುಟ್ಟ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ನಂತರ ಅಂಗಜಾಲರ ರಮೇಶ ಎನ್ನುವವರ ಮನೆಯ ಬೀಗವನ್ನು ಮುರಿದಿರುವ ಕಳ್ಳರು ಅಲ್ಲಿಯೂ ಗೋದ್ರೇಜ್ ವಸ್ತುಗಳನ್ನು ಕಳ್ಳತನ ಮಾಡಿದ್ದು, ಮನೆಯವರು ಊರಿಗೆ ಹೋಗಿರುವುದರಿಂದ ಕಳ್ಳತನದ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಸರಣಿ ಕಳ್ಳತನ ನಡೆದ ಮನೆಗಳಿಗೆ ಕಂಪ್ಲಿ ಪೊಲೀಸ್ ಠಾಣೆ ಸಿಪಿಐ ಆರ್. ಹನುಮಂತಪ್ಪ, ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಡಿ. ಹುಲುಗಪ್ಪ, ಅಪರಾಧ ವಿಭಾಗದ ಪಿಎಸ್ಐ ಎಚ್. ದೊಡ್ಡಣ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳ್ಳಾರಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಶೋಧ ನಡೆಸಿದರು. ಪೊಲೀಸ್ ಶ್ವಾನವು ಕಳ್ಳತನ ನಡೆದ ಮೂರು ಮನೆಗಳ ಸುತ್ತ ಸಂಚರಿಸಿ ಬಸ್ ನಿಲ್ದಾಣದಲ್ಲಿ ಸ್ಥಗಿತಗೊಂಡಿದೆ. ಬೆರಳಚ್ಚು ತಜ್ಞರು ಕಳ್ಳರ ಬೆರಳಚ್ಚು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದು, ಕಳ್ಳರ ಸುಳಿವು ಸಿಗುವ ಆಶಾಭಾವನೆ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಉಪವಿಭಾಗದ ಡಿವೈಎಸ್ಪಿ ಡಿ.ಡಿ. ಮಾಳಗಿ, ಕಳ್ಳತನ ನಡೆದ ಮೂರು ಮನೆಗಳಿಗೆ ಭೇಟಿ ನೀಡಿ ಮನೆಯವರ ಜತೆ ಚರ್ಚಿಸಿ ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಮನೆಯವರು ಎಲ್ಲಿಗಾದರೂ ಹೋಗುವಾಗ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ಗಳಲ್ಲಿ ಇಟ್ಟು ಸೂಕ್ತವಾಗಿ ರಕ್ಷಿಸಿಕೊಳ್ಳಬೇಕೆಂದು ತಿಳಿಸಿದರು. ನಂತರ ಕಂಪ್ಲಿ ಸಿಪಿಐ, ಅಪರಾಧ ವಿಭಾಗದ ಪಿಎಸ್ಐ ಮತ್ತು ಕಾನೂನು ವಿಭಾಗದ ಪಿಎಸ್ಐಗಳಿಗೆ ಮತ್ತು ಬೆರಳಚ್ಚು ತಜ್ಞರಿಗೆ ಸೂಕ್ತವಾಗಿ ಪರಿಶೀಲಿಸಿ ಕಳ್ಳರ ಪತ್ತೆಗೆ ಶ್ರಮಿಸಲು ಸೂಚಿಸಿದರು.