ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೂಡ್ಲಿಗಿ ತಾಪಂ ಇಒ ಶಿವಪ್ಪ ಅನ್‌ಫಿಟ್

Vishwanath S
Updated On : 10 Jun 2014, 12:19 pm

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 9
ತಾಪಂ ಇಓ ಅನ್‌ಫಿಟ್ ಇದ್ದಾರೆ. ಅಂಥವರಿಂದ ಹಿಂದುಳಿದ ತಾಲೂಕಿನ ಅಭಿವೃದ್ಧಿ ಹೇಗೆ ಸಾಧ್ಯ? ನಾವು ನಮ್ಮನ್ನ ನಂಬಿದ ಜನತೆಗೆ ಹೇಗೆ ಉತ್ತರ ಕೊಡ್ಬೇಕು. ಒಂದು ಕೆಲ್ಸನೂ ಅಧಿಕಾರಿಗಳು ಸರಿಗೆ ಮಾಡುತ್ತಿಲ್ಲ. ತಾಪಂ ಸದಸ್ಯರು ಮಾತಿಗೆ ಮೂರು ಕಾಸಿನ ಬೆಲೆಯಿಲ್ಲದಂತಾಗಿದೆ. ಹೀಗಾಗಿ ನಾವು ಸಾಮೂಹಿಕ ರಾಜಿನಾಮೆ ನೀಡುತ್ತೇವೆ ಎಂದು ತಾಪಂ ಅಧ್ಯಕ್ಷ , ಉಪಾಧ್ಯಕ್ಷ ಸಹಿತ 17 ತಾಪಂ ಸದಸ್ಯರು ಇಓ ಶಿವಪ್ಪ ಅವರಿಗೆ ರಾಜಿನಾಮೆ ನೀಡಿದ ಪ್ರಸಂಗ ಸೋಮವಾರ ನಡೆದಿದೆ.
ಇಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ 14ನೇ ಸಾಮಾನ್ಯ ಸಭೆಯಲ್ಲಿ ತಾಪಂ ಇಓ ಶಿವಪ್ಪ ಅವರನ್ನು ಸದಸ್ಯರಾದ ಗುರುಪ್ರಸಾದ್, ಎನ್.ಪಿ. ಮಂಜುನಾಥ, ಹೇಮಣ್ಣ, ಮಲ್ಲಿಕಾರ್ಜುನ ಹಾಗೂ ವಿಶಾಲಾಕ್ಷಿ ಸಹಿತ ಅನೇಕ ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತಾಪಂ ಸದಸ್ಯರಾಗಿ ಮೂರು ವರ್ಷ ಕಳೆದರೂ ಕಚೇರಿಯಲ್ಲಿ ಒಂದು ಮಹಿಳಾ ಶೌಚಾಲಯ ನಿರ್ಮಿಸಿಕೊಳ್ಳದಷ್ಟು ಯೋಗ್ಯತೆ ಇಲ್ಲವೆಂದ ಮೇಲೆ ಸದಸ್ಯರಾಗಿ ನಮ್ದೇನ್ರೀ ಕೆಲ್ಸ. ತಗೊಳ್ರೀ ರಾಜಿನಾಮೆ ಎಂದು ಎಲ್ಲ ಸದಸ್ಯರು ಸಹಿ ಮಾಡಿದ ಪತ್ರವನ್ನು ಇಓ ಶಿವಪ್ಪ ಅವರಿಗೆ ಸಲ್ಲಿಸಿದರು. ರಾಜಿನಾಮೆ ಸಲ್ಲಿಸದ ನಂತರವೂ ಸಭೆ ನಡೆದಿದ್ದರಿಂದ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಸಭೆಯ ಪ್ರಸಂಗಗಳನ್ನು ವೀಕ್ಷಿಸಿದರು.
ತಾಲೂಕಿನ ಮಂಗನಹಳ್ಳಿ ಗ್ರಾಮಸ್ಥರು ಸೌಲಭ್ಯಗಳಿಗೆ ಒತ್ತಾಯಿಸಿ ಇದೀಗ ತಾಪಂ ಎದುರು ಪ್ರತಿಭಟಿಸುತ್ತಿದ್ದಾರೆ. ಇದಕ್ಕೇನು ಹೇಳ್ತೀರಿ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇಓ ಶಿವಪ್ಪ ಮಾತ್ರ ಮಂಗನಹಳ್ಳಿಯಲ್ಲಿ ಏನೈತ್ರಿ ಸಮಸ್ಯೆ ನನಗೆ ಗೊತ್ತೇ ಇಲ್ಲ ಎಂದು ಕೂಲ್ ಆಗಿ ಸಭೆಯಲ್ಲಿ ಪ್ರತಿಕ್ರಿಯಿಸಿ  ನಂತರ ಕಾಳಾಪುರ ಪಿಡಿಓ ಮೈಲಪ್ಪರನ್ನು ವಿಚಾರಿಸಿದರು.
ತಕ್ಷಣ ಆಕ್ರೋಶಗೊಂಡ ಸದಸ್ಯರು, ಮಾಧ್ಯಮಗಳಲ್ಲಿ ಗ್ರಾಮದ ಅವ್ಯವಸ್ಥೆ ಬಗ್ಗೆ ಸಾಕಷ್ಟು ವರದಿಗಳು ಬಂದರೂ ನಿರ್ಲಕ್ಷ್ಯ ತೋರಿದ್ದಲ್ಲದೇ, ಏನು ಸಮಸ್ಯೆ ಎಂದು ಕೇಳುತ್ತೀರಲ್ಲಾ. ನಾಚಿಕೆ ಆಗಲ್ವ ನಿಮಗೆ ಎಂದು ಗುರುಪ್ರಸಾದ್, ಮಂಜುನಾಥ ಮುಂತಾದವರು ಇಓ ಮೇಲೆ  ಹರಿಹಾಯ್ದರು.
ಮೂರು ವರ್ಷಗಳಿಂದ ಗುಡೇಕೋಟೆ ಸರ್ಕಾರಿ ಶಾಲೆಯ ಏಳು ಎಕರೆ ಶಾಲಾ ಭೂಮಿ ಹುಡುಕಿ ಕೊಡಿ ಎಂದು ಹೇಳುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದೀರಿ ಂದು ಸದಸ್ಯೆ ವಿಶಾಲಾಕ್ಷಿ ರಾಜಣ್ಣ ಕಿಡಿಕಾರಿದರು. ತಾಲೂಕಿನಲ್ಲಿ ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಏನು ತೊಂದರೆಯಾಗಿದೆ ಎಂದು ಸದಸ್ಯರಾದ ಮಲ್ಲಿಕಾರ್ಜುನ, ಬೆಣ್ಣೆಕೊಟ್ರೇಶ್ ಪ್ರಶ್ನಿಸಿದರು. ನಿಗಮದಲ್ಲಿ ಕೆಲವೊಂದು ಸಮಸ್ಯೆಗಳಿಂದ ತೊಂದರೆಯಾಗಿದೆ ಎಂದು ವಸತಿ ಯೋಜನೆ ನೋಡಲ್ ಅಧಿಕಾರಿ ನಾಗರಾಜ್ ತಿಳಿಸಿದರು.
ತಾಪಂ ವಸತಿ ಸಮುಚ್ಛಯದಲ್ಲಿ ಸಂಬಂಧವೇ ಇಲ್ಲದ ಅಧಿಕಾರಿಗಳು ಇದ್ದಾರೆ ಎಂದರೆ ತಾಪಂ ಆಡಳಿತ ಎಷ್ಟರಮಟ್ಟಿಗೆ ಅಧೋಗತಿಗೆ ತಲುಪಿದೆ ಎಂದು ಸದಸ್ಯ ಗುರುಪ್ರಸಾದ್ ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸಿದರು. ಆದರೆ ಇಓ ಶಿವಪ್ಪ ಮಾತ್ರ ನಮಗೇನು ಸಂಬಂಧವಿಲ್ಲ ಎನ್ನುವಂತೆ ಹಸನ್ಮುಖಿಯಾಗಿ ಕುಳಿತಿದ್ದರು. ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪುರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪೂಜಾರಹಳ್ಳಿ ಮಹೇಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬೆಣ್ಣೆ ಕೊಟ್ರೇಶ್, ಇಓ ಶಿವಪ್ಪ ವೇದಿಕೆಯಲ್ಲಿದ್ದರು. ಸದಸ್ಯರು, ಅಧಿಕಾರಿಗಳು, ಪಿಡಿಒಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement