ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

16ರಂದು ಬ್ರಹ್ಮಿಣಿ ಭೂ ಸಂತ್ರಸ್ತರಿಂದ ರಸ್ತೆ ತಡೆ

Vishwanath S
Updated On : 12 Jun 2014, 11:22 am

ಬಳ್ಳಾರಿ: ಬ್ರಹ್ಮಿಣಿ ಕಂಪನಿಗೆ ನೀಡಿರುವ ಭೂಮಿಗೆ ಹೆಚ್ಚಿನ ಪರಿಹಾರ ನಿಗದಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದರೂ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಜೂ. 16ರಂದು ವೇಣಿವೀರಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 63 ಬಂದ್ ಮಾಡಿ ಹೋರಾಟ ಮಾಡುವುದಾಗಿ ಭೂ ಸಂತ್ರಸ್ತ ರೈತರಾದ ಆನಂದ್ ಹಾಗೂ ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಿಣಿ ಕೈಗಾರಿಕೆಗೆ ಭೂಸ್ವಾಧೀನ ಮಾಡಿಕೊಳ್ಳುವಾಗ ಅಂದು ಸಚಿವರಾಗಿದ್ದ ಜನಾರ್ದನ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ತಾರತಮ್ಯ ಮಾಡಿದ್ದಾರೆ. ಆರ್ಸೆಲರ್ ಮಿತ್ತಲ್ ಭೂಸ್ವಾಧೀನಕ್ಕೆ ಹೆಚ್ಚಿನ ಬೆಲೆ, ತಮ್ಮ ಕೈಗಾರಿಕೆ ಭೂಸ್ವಾಧೀನಕ್ಕೆ ಕಡಿಮೆ ಬೆಲೆ ನಿಗದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು 2010ರಿಂದ ಹೋರಾಡುತ್ತಿದ್ದಾರೆ. ನ್ಯಾಯಾಲಯ ಎಕರೆಗೆ ರು. 12ರಿಂದ 16 ಲಕ್ಷ ಬೆಲೆ ನಿಗದಿ ಮಾಡುವಂತೆ ಸೂಚಿಸಿದೆ. ಆದರೂ ಜಿಲ್ಲಾಧಿಕಾರಿ, ಕೆಐಎಡಿಬಿ ಈವರೆಗೂ ಬೆಲೆ ನಿಗದಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಕುಡಿತಿನಿ, ವೇಣಿವೀರಾಪುರ, ಕೊಳಗಲ್ ಗ್ರಾಮಗಳ 1000ಕ್ಕೂ ಹೆಚ್ಚು ರೈತರ 4700 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅದರಲ್ಲಿ 1150 ಎಕರೆ ಪ್ರದೇಶದ ರೈತರು ಪರಿಹಾರದ ಹಣವನ್ನು ಪಡೆದಿಲ್ಲ. ವಶಪಡಿಸಿಕೊಂಡಿರುವ ಭೂಮಿಯಲ್ಲಿ 800 ಎಕರೆ ನೀರಾವರಿ ಭೂಮಿ. ಇನ್ನೂ 200 ಎಕರೆಯ ರೈತರು ನೋಟಿಫಿಕೇಷನ್ ರದ್ದುಪಡಿಸಬೇಕೆಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಸೂಕ್ತ, ನ್ಯಾಯೋಚಿತ ಬೆಲೆ ನಿಗದಿ ಮಾಡುವುದು ಬಿಟ್ಟು, ಕೈಗಾರಿಕೋದ್ಯಮಿಗಳು ಹಾಗೂ ಅಧಿಕಾರಿಗಳು ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಆರೋಪಿಸಿದರು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ನ್ಯಾಯಾಲಯದ ಆದೇಶ ಬಂದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ನ್ಯಾಯಾಲಯದ ಆದೇಶವನ್ನು ನೀಡಿದಾಗ, ಅದರ ಅನುಸಾರವೇ ಬೆಲೆ ನಿಗದಿ ಮಾಡುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ತಿಳಿಸಿದ್ದರೂ, ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಕೈಗಾರಿಕೆಯ ಮಾಲೀಕರು, ಕೆಐಎಡಿಬಿ, ಜಿಲ್ಲಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯನ್ನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅಲ್ಲದೆ ಜೂ.16ರಂದು ರಸ್ತೆ ತಡೆಯ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವೀರಾರೆಡ್ಡಿ, ಗೋವಿಂದ ರೆಡ್ಡಿ, ಅಯ್ಯಪ್ಪ, ಮಲ್ಲಿಕಾರ್ಜುನ, ಗುರಪ್ಪ ಗ್ರಾಮಗಳ ಭೂ ಸಂತ್ರಸ್ತ ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement