ಕೇಳಿದ್ದು ಪದವಿ ಕಾಲೇಜು ಸಿಕ್ಕಿದ್ದು ಐಟಿಐ ಕಾಲೇಜು
ಕೊಟ್ಟೂರು: ಪಟ್ಟಣದ ಜನತೆ ಬಹುದಿನಗಳಿಂದ ನಿರೀಕ್ಷಿಸುತ್ತಿರುವ ಸರ್ಕಾರಿ ಪದವಿ ಕಾಲೇಜು ಪ್ರಸ್ತಾಪ ಸದ್ದಿಲ್ಲದೇ ಹಿಂದೆ ಸರಿದಿದ್ದರೆ ಬೇಡಿಕೆಯೇ ಇಲ್ಲದ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ) ಕಾಲೇಜು ಮಂಜೂರಾಗಿದೆ.
2010ರ ಶೈಕ್ಷಣಿಕ ಸಾಲಿನಲ್ಲಿ ಕೊಟ್ಟೂರಿನಲ್ಲಿ ಖಂಡಿತಾ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾರಂಭಿಸುವ ಆಶಯ ಹೊಂದಿ ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿತ್ತು. ಪಟ್ಟಣದಲ್ಲಿ ಕಾಲೇಜು ಆರಂಭಿಸಲು ಬೇಕಾಗುವ ಪೂರಕ ಸೌಲಭ್ಯಗಳ ಪರಿಶೀಲನೆಗೆ 2008ರಲ್ಲಿ ಏಕ ಸದಸ್ಯ ಸಮಿತಿ ರಚನೆಗೊಂಡಿತು. ಗುಲ್ಬರ್ಗ ಶಿಕ್ಷಣ ಇಲಾಖೆಯ ಪ್ರಾದೇಶಿಕ ಆಯುಕ್ತರು ಕೊಟ್ಟೂರಿನಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯ ಆರಂಭಿಸಲು ವಾಸ್ತವ ಸ್ಥಿತಿ ಅಧ್ಯಯನಕ್ಕೆ ಆಗಿನ ಪ್ರಾಚಾರ್ಯರಾಗಿದ್ದ ಲಕ್ಷ್ಮಿನಾರಾಯಣ ರೆಡ್ಡಿಯವರನ್ನು ನೇಮಕ ಮಾಡಲಾಗಿತ್ತು.
ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಅಗತ್ಯವಾದ ಸ್ಥಳ ಪರಿಶೀಲನೆಗೆಂದು 2009ರ ಫೆಬ್ರವರಿ 12ರಂದು ಲಕ್ಷ್ಮಿನಾರಾಯಣರೆಡ್ಡಿ ಕೊಟ್ಟೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಕರೆಯಲಾಗಿದ್ದ ಸಭೆಗೆ ಹಗರಿಬೊಮ್ಮನಹಳ್ಳಿಯ ಆಗಿನ ಶಾಸಕ ಕೆ. ನೇಮಿರಾಜ್ನಾಯ್ಕ ಆಗಮಿಸಿ 2009ರ ಶೈಕ್ಷಣಿಕ ಸಾಲಿನಲ್ಲೇ ಪಟ್ಟಣದಲ್ಲಿ ಆರಂಭಗೊಳ್ಳಲು ಅಗತ್ಯವಾದ ಎಲ್ಲಾ ಸಹಕಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.
ತಾತ್ಕಾಲಿಕ ವ್ಯವಸ್ಥೆ
ಸರ್ಕಾರಿ ಪದವಿ ಮಹಾವಿದ್ಯಾಲಯವನ್ನು ತಾತ್ಕಾಲಿಕವಾಗಿ ಪಟ್ಟಣದ ಸಂತೆ ಮಾರ್ಕೆಟ್ನಲ್ಲಿರುವ ಸರ್ಕಾರಿ ಗಚ್ಚಿನಮಠ ಹಿರಿಯ ಪ್ರಾಥಮಿಕ ಶಾಲೆಯ 8 ಕೊಠಡಿಗಳನ್ನು ಬಳಸಿಕೊಳ್ಳಲು ಸಮಿತಿಯ ಮುಖ್ಯಸ್ಥ ಲಕ್ಷ್ಮಿನಾರಾಯಣರೆಡ್ಡಿ ಒಪ್ಪಿಗೆ ಸೂಚಿಸಿ ವರದಿಯಲ್ಲಿ ನಮೂದಿಸಿದ್ದರು. ಮಹಾವಿದ್ಯಾಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ವಿಶಾಲ ಮೈದಾನದ ಪೈಕಿ 3 ಎಕರೆ ಜಮೀನನ್ನು ದೊರಕಿಸಿಕೊಡುವ ವಾಗ್ದಾನ ಕೂಡ ಪ್ರಸ್ತಾಪಗೊಂಡಿತ್ತು.
ಸೂಕ್ತ ಸ್ಥಳ
ಕೊಟ್ಟೂರು ಸುತ್ತಮುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಲ್ಲ. ಇದು ಕೊಟ್ಟೂರಿನಲ್ಲಿಯೇ ಕಾಲೇಜು ಪ್ರಾರಂಭಿಸುವುದಕ್ಕೆ ಪ್ರಮುಖ ಮಾನದಂಡ ಎಂದು ಪ್ರಾಚಾರ್ಯ ಲಕ್ಷ್ಮಿನಾರಾಯಣ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದರಲ್ಲದೇ ಪಟ್ಟಣದಲ್ಲಿನ ಅಗತ್ಯಗಳು, ಮೂಲಭೂತ ಸೌಕರ್ಯಗಳು ತಮಗೆ ಪೂರ್ಣ ವಿಶ್ವಾಸ ಮೂಡಿಸಿವೆ ಎಂದು ವರದಿ ತಯಾರಿಸಿ ಕಳುಹಿಸಿದ್ದರು. ವರದಿ ಸಲ್ಲಿಕೆಯಾಗಿ 5 ವರ್ಷ ಕಳೆದರೂ ಕೊಟ್ಟೂರಿಗೆ ಸರ್ಕಾರಿ ಪದವಿ ಕಾಲೇಜು ಇನ್ನೂ ಗಗನ ಕುಸುಮವಾಗಿದೆ.
ಕೊಟ್ಟೂರಿಗೆ ಸಿಕ್ಕಿದ್ದು ಬೇರೆ
ಸರ್ಕಾರ ಪ್ರಸಕ್ತ ಸಾಲಿಗೆ ಮಂಜೂರು ಮಾಡಿದ 100 ಐಟಿಐ ಕಾಲೇಜು ಸ್ಥಾಪನೆ ಪಟ್ಟಿಯಲ್ಲಿ ಕೊಟ್ಟೂರು ಸ್ಥಾನ ಪಡೆದುಕೊಂಡಿದೆ. ಐಟಿಐ ಕಾಲೇಜು ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಉದ್ಯೋಗ ಮತ್ತು ತರಬೇತಿ ಇಲಾಖೆ ನಿರ್ದೇಶನಾಲಯದ ಅಧಿಕಾರಿಗಳು ಇಟ್ಟಿಗಿ ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯರನ್ನು ನೇಮಿಸಿ ಈ ಸಂಬಂಧ ಪೂರಕ ವರದಿ ತರಿಸಿಕೊಂಡಿದೆ. ಯಾವುದೇ ಹಂತದಲ್ಲಿ ಕಾಲೇಜು ಆರಂಭಗೊಳ್ಳಲಿದೆ. ಅಷ್ಟೇನೂ ಬೇಡಿಕೆ ಇಲ್ಲದ ಐಟಿಐ ಕಾಲೇಜು ಸದ್ದಿಲ್ಲದೇ ಆರಂಭಗೊಳ್ಳುವ ಹಂತ ತಲುಪಿದ್ದರೆ ಬಹು ವರ್ಷದ ಬೇಡಿಕೆ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಸ್ತಾಪ ಪದೇ ಪದೇ ದೂರವಾಗುತ್ತಿರುವುದು ದುರಂತವೇ ಸರಿ ಎಂದು ಇಲ್ಲಿನ ವಿದ್ಯಾರ್ಥಿಗಳು ಅಲುಬತೊಡಗಿದ್ದಾರೆ.