ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪ್ರೊ. ಕಲಬುರ್ಗಿ, ಮೂರ್ತಿ ದೇಶದಲ್ಲಿರಲು ಅರ್ಹರಲ್ಲ

Vishwanath S
Updated On : 12 Jun 2014, 11:22 am

ಹೊಸಪೇಟೆ: ವಿವಾದಾತ್ಮಕ ಹೇಳಿಕೆ ನೀಡಿ, ಸಮಾಜದ ಶಾಂತಿ ಕದಡಿರುವ ಡಾ. ಎಂ.ಎಂ. ಕಲಬುರ್ಗಿ, ಡಾ. ಯು.ಆರ್. ಅನಂತಮೂರ್ತಿ ಅವರಿಗೆ ಕೌನ್ಸೆಲಿಂಗ್ ಮಾಡಿಸಬೇಕು ಎಂದು ಹಿರೇಹಡಗಲಿಯ ಹಾಲುವೀರಪ್ಪಜ್ಜ ಹೇಳಿದ್ದಾರೆ.
ಹಂಪಿಯ ಶಿವರಾಮ ಅವಧೂತ ಆಶ್ರಮ ಹೇಮಕೂಟದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ- ಕರ್ನಾಟಕದ ಹಿಂದೂ ಪದಶಾಹಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಸ್ಮರಣಾರ್ಥ ಹಿಂದೂ ಸಾಮ್ರಾಜ್ಯೋತ್ಸವ ಮತ್ತು ರಾಜ್ಯ ಹಿಂದೂ ಸಂಘಟನೆಗಳ ಮಠಾಧೀಶರ, ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ದೇಶದಲ್ಲಿ ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ಯು.ಆರ್. ಅನಂತ ಮೂರ್ತಿ ಇರಲು ಅರ್ಹರಲ್ಲ. ನಮ್ಮ ಧರ್ಮ, ದೇಶಕ್ಕೆ ಸಂಕಷ್ಟ ಎದುರಾದಾಗ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸುವ ಅಗತ್ಯವಿದೆ ಎಂದರು.
ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಶ್ರವಣಕುಮಾರ್ ರಾಯ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧಿಜೀವಿಗಳೆನಿಸಿಕೊಂಡವರು ಸಮಾಜದ ಶಾಂತಿ ಹಾಳು ಮಾಡುತ್ತಿರುವುದು ಸರಿಯಲ್ಲ. ಕಲಬುರ್ಗಿ, ಅನಂತಮೂರ್ತಿ ಅವರಿಗೆ ಪಿತ್ತ ನೆತ್ತಿಗೇರಿದೆ. ಅನಂತಮೂರ್ತಿಯವರ ತಂದೆ ಭಾವಚಿತ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ ಅವರು ಸುಮ್ಮನಿರುವರೇ? ಎಂದು ಪ್ರಶ್ನಿಸಿದರು.
ಆನೆಗುಂದಿ ವಿಜಯನಗರ ಸಾಮ್ರಾಜ್ಯದ ವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಕಾರ್ಯಕ್ರಮ ಉದ್ಘಾಟಿದರು. ಹಗರಿಬೊಮ್ಮನಹಳ್ಳಿಯ ಶ್ರೀ ಗುರು ಪಾಲಸ್ವಾಮಿ ಮಠದ ಹಾಲುಶಂಕರ ಸ್ವಾಮೀಜಿ, ಧಾರವಾಡದ ಮನಗುಂಡಿ ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ, ಮೈಸೂರಿನ ಅನ್ನಪೂರ್ಣೇಶ್ವರಿ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹಿಂದೂ ಮಹಾಸಭಾದ ಸಂತೋಷ್ ರಾಯ್, ರವಿ ಮಗಾರ್, ಕೊಪ್ಪಳದ ಡಾ. ಕೆ.ಜಿ. ಕುಲಕರ್ಣಿ, ಹೊಸಪೇಟೆಯ ಪಂತರ್ ಜಯಂತ್, ಗಂಗಾವತಿಯ ಭೀಮಸೇನ್ರಾವ್ ಅಳಂಡಿಕರ್, ಹಂಪಿಯ ಮೋಹನ್ ಚಿಕ್ಕಭಟ್ ಜೋಷಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement