ಮೌಢ್ಯಾಚರಣೆ ತೊಲಗಿಸಿ: ಸರ್ಕಾರಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 11
ಹಿಂದುಳಿದವರ ಮತ್ತು ಮಹಿಳೆಯರ ಶೋಷಣೆಗೆ ಕಾರಣವಾಗಿರುವ ಮೌಢ್ಯಾಚರಣೆ, ಕಂದಾಚಾರಗಳನ್ನು ತೊಲಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ನಡೆಯುವ ಪಂಕ್ತಿಭೇದ, ಮಡೆ ಮಡೆಸ್ನಾನ, ವಸ್ತ್ರ ಕಳಚಿ ದೇವಸ್ಥಾನದ ಒಳಗಡೆ ಹೋಗುವ ಪದ್ಧತಿಗಳನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಘಟಕ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆಯನ್ನು ವ್ಯಾಪಕವಾಗಿ ಚರ್ಚೆಗೆ ಒಳಪಡಿಸಿ ಅಂಗೀಕರಿಸಬೇಕು. ದೇವದಾಸಿ ಮಕ್ಕಳ ಜನನಕ್ಕೆ ಕಾರಣವಾಗುವ ಅವರ ತಂದೆಯವರ ಆಸ್ತಿಯಲ್ಲಿ ಪಾಲು ಸಿಕ್ಕುವಂತೆ ಹಾಗೂ ದೌರ್ಜನ್ಯದ ದೇವದಾಸಿ ಪದ್ಧತಿಗೆ ಅಮಾಯಕ ಹುಡುಗಿಯರನ್ನು ಬಲಿಪಶು ಮಾಡಲು ಕೈಜೋಡಿಸುವ ದುಷ್ಟರನ್ನು ಶಿಕ್ಷಿಸುವಂತೆ ಮತ್ತು ಅವರಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ಆಸ್ತಿಯಲ್ಲಿ ಪಾಲು ಸಿಕ್ಕುವಂತೆ ಸೂಕ್ತ ಮಾರ್ಪಾಟು (ಕಾಯಿದೆಯಲ್ಲಿ) ತರಬೇಕು ಎಂದು ಒತ್ತಾಯಿಸಿದ್ದಾರೆ. ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುವರ ಕೆಲಸವನ್ನು ಸಾರ್ವಜನಿಕ ಕೆಲಸವೆಂದು ಪರಿಗಣಿಸಿ, ಕೆಲಸ ಮಾಡುವವರ ನಡುವೆ ಸ್ಮಶಾನಕ್ಕೊಬ್ಬರಂತೆ ಪಂಚಾಯಿ,ತಿ ಪುರಸಭೆ, ನಗರಸಭೆ ಅಥವಾ ಆ ಸ್ಥಳೀಯ ಸಂಸ್ಥೆಗಳ ನೌಕರರೆಂದು ಪರಿಗಣಿಸಿ, ಕನಿಷ್ಠ ವೇತನ ನೀಡಬೇಕು. ದಲಿತರು ಮತ್ತು ಹಿಂದುಳಿದ ಜಾತಿಯ ಬಡಜನರಿಗೆ ತಲಾ ಎರಡು ಎಕರೆ ಕೃಷಿಯೋಗ್ಯ ಜಮೀನನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಬಸವ ಕಲ್ಯಾಣದಲ್ಲಿ ಪ್ರಗತಿಪರ ಮಠಾಧೀಶರ ನೇತೃತ್ವದಲ್ಲಿ 260ಕ್ಕೂ ಹೆಚ್ಚು ಮಠಾಧೀಶರು, ಸ್ವಾಮೀಜಿಗಳು ಅಸ್ಪೃಶ್ಯ ಆಚರಣೆಯನ್ನು ವಿರೋಧಿಸಿ, ಸೋಮವಾರ ಕೈಗೊಂಡ ಉಪವಾಸ ಸತ್ಯಾಗ್ರಹವನ್ನು ಸಂಘವು ಬೆಂಬಲಿಸುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷೆ ಬಿ. ಮಾಳಮ್ಮ ತಿಳಿಸಿದ್ದಾರೆ.