ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ
ಹೂವಿನಹಡಗಲಿ: ಈ ಸರ್ಕಾರಿ ಕಾಲೇಜಿಗೆ ಆರಂಭದಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯ ಶೌಚಾಲಯಗಳಿಲ್ಲ, ಕುಡಿಯುವ ನೀರಿಲ್ಲ, ವಿದ್ಯುತ್ ಸೌಕರ್ಯವಿಲ್ಲ ಹೀಗೆ ಇಲ್ಲಗಳದ್ದೇ ಕಾರುಬಾರು.
25 ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಶಾಸ್ತ್ರಿ, ಸ್ವಾತಂತ್ರ್ಯ ಯೋಧ ಬನ್ನಿಮಟ್ಟಿ ಲೆಂಕಪ್ಪ, ನೆಗಳೂರು ಧರ್ಮಣ್ಣ ಮತ್ತು ಕಲ್ಯಾಣಿ ಚಾಲುಕ್ಯರ ಸುಂದರ ಶಿಲ್ಪ ಶ್ರೀಮಂತಿಕೆ ಸಾರುವ ತಾಲೂಕಿನ ಮಾಗಳ ಗ್ರಾಮ 8 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 2006 ರಲ್ಲಿ ಎಸ್ವಿಡಿಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭವಾಗಿದೆ.
ಕಾಲೇಜಿನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ ಕಾಲೇಜಿಗೆ ಮೂಲಭೂತ ಸೌಲಭ್ಯಗಳ ಕೊರತೆ ನಡುವೆ ಉತ್ತಮ ಫಲಿತಾಂಶ ಬಂದಿದೆ.
ಕಾಲೇಜು ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ಶೌಚಾಲಯಗಳ ನಿರ್ಮಾಣವಿಲ್ಲ. ಕಾಲೇಜು ಹೊಸ ಕೊಠಡಿಗಳ ನಿರ್ಮಾಣ ಮಾಡುವಾಗ ಸಂಬಂಧ ಪಟ್ಟ ಗುತ್ತಿಗೆದಾರರು ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಕಾಲೇಜಿಗೆ ಬಂದಿರುವ ಕಂಪ್ಯೂಟರ್ಗಳು ವಿದ್ಯುತ್ ಸೌಲಭ್ಯವಿಲ್ಲದೇ ಮೂಲೆಯಲ್ಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಇದ್ದೂ ಇಲ್ಲದಂತಾಗಿದೆ.
2006ರಲ್ಲಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆಗಿತ್ತು, ತದ ನಂತರದಲ್ಲಿ 2011 ರಲ್ಲಿ ಕಾಲೇಜು ಪ್ರೌಢ ಶಾಲೆಗಳು ಪ್ರತ್ಯೇಕವಾಗಿವೆ. ಇದರಿಂದ ಪ್ರೌಢ ಶಾಲೆಯಲ್ಲಿನ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಲಭ್ಯವಿಲ್ಲದ ಕಾರಣ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕುಡಿಯಲು ನೀರಿಲ್ಲ
ಈ ಬಾರಿ 60-70 ವಿದ್ಯಾರ್ಥಿಗಳಿರುವ ಈ ಸರ್ಕಾರಿ ಕಾಲೇಜಿನಲ್ಲಿ ಕುಡಿಯಲು ನೀರಿನ ಸೌಲಭ್ಯವಿಲ್ಲ. ತರಗತಿಗಳು ಬಿಟ್ಟ ಮೇಲೆ ಕಾಲೇಜು ಪಕ್ಕದಲ್ಲಿರುವ ಮನೆಗಳಿಗೆ ತೆರಳಿ ನೀರು ಕುಡಿದು ಬರುವ ಪರಿಸ್ಥಿತಿ ಇದೆ. ಈ ಕುರಿತು ಸಾಕಷ್ಟು ಬಾರಿ ಗ್ರಾಪಂ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾರೂ ಇತ್ತ ಗಮನಿಸಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು. ಕಾಲೇಜು ಶೌಚ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜಿಪಂ ಸಿಇಒದಿಂದ ಹಿಡಿದು ಗ್ರಾಪಂ ಅಧ್ಯಕ್ಷರವರೆಗೂ ಮನವಿ ಮಾಡಿಕೊಂಡರೂ ಈವರೆಗೂ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ.