ಮಹಿಳೆಯರ ಮೇಲೆ ಅಪರಾಧ ತಡೆಗಟ್ಟಿ
ಧಾರವಾಡ: ಮಹಿಳೆಯರ ಮೇಲಿನ ಅಪರಾಧಗಳನ್ನು ವಿರೋಧಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಗುರುವಾರ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಹೆಣ್ಣುಮಕ್ಕಳಿಗೆ ಭದ್ರತೆಯನ್ನು ಒದಗಿಸುತ್ತೇವೆಂದು ಹೇಳಿದ ಯಾವ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅದಕ್ಕೆ ಬದಲಾಗಿ ಅಪರಾಧ ಎಸಗುವವರಿಗೆ ಕುಮ್ಮಕ್ಕು ನೀಡುವ ರೀತಿಯಲ್ಲಿ ಸರ್ಕಾರದ ಮುಖಂಡರು ಮಾತನಾಡುತ್ತಾರೆ ಎಂದು ಮುಲಾಯಂ ಸಿಂಗ್ ಮತ್ತು ಬಾಬುಲಾಲ್ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಲಾಯಿತು. ನಿವೃತ್ತ ಪಾಂಶುಪಾಲ ಡಾ. ವೀಣಾ ಸಂಕನಗೌಡರ, ಮಹಿಳೆಯರ ಮೇಲೆ ಅಪರಾಧಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿವೆ. ಇದಕ್ಕೆ ಪರಿಹಾರ ಎಲ್ಲ ಮಹಿಳೆಯರ ಮತ್ತು ನಾಗರಿಕರ ಐಕ್ಯ ಹೋರಾಟವೊಂದೇ ದಾರಿ ಎಂದರು. ಸುನಂದಾ ಕಡಮೆ, ಸಂಘಟನೆ ಜಿಲ್ಲಾಧ್ಯಕ್ಷರಾದ ಭುವನಾ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಪ್ರಭಾವತಿ ಗೂಗಲ್ ವಹಿಸಿದ್ದರು. ಪ್ರತಿಭಟನೆಯಲ್ಲಿ ಶ್ರುತಿ, ರಾಧಾ, ರೇಣುಕಾ, ಕಾಶವ್ವ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಇದ್ದರು. ಪ್ರತಿಭಟನೆಯ ಅನಂತರ ಜಿಲ್ಲಾಧಿಕಾರಿ ಕಚೇರಿಗೆ ನಿಯೋಗದಲ್ಲಿ ತೆರಳಿ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ನ್ಯಾ. ವರ್ಮಾ ಆಯೋಗದ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಅಶ್ಲೀಲ ಸಿನಿಮಾ, ಜಾಹೀರಾತುಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಿ, ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ, ಈ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕದಿಂದ ಹಿಡಿದು ಎಲ್ಲ ಸೌಲಭ್ಯಗಳನ್ನು ಒದಗಿಸಿ, ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಜೂಡೋ, ಕರಾಟೆಯನ್ನು ಕಲಿಸಲು ಕ್ರಮ ಕೈಗೊಳ್ಳಿ ಎಂಬ ಬೇಡಿಕೆಗಳಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಮುಖ್ಯಮಂತ್ರಿಗೆ ಕಳುಹಿಸಲಾಯಿತು.