ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದಲಿತರ ಮೇಲೆ ದೌರ್ಜನ್ಯ: ಪ್ರಕರಣ ದಾಖಲಿಸಲು ವಿಳಂಬ

Rashmi Kasaragodu
Updated On : 18 Jun 2014, 12:31 pm

ಬಳ್ಳಾರಿ: ದಲಿತರ ಮೇಲೆ ದೌರ್ಜನ್ಯ ನಡೆದಾಗ ಅಧಿಕಾರಿಗಳು ಆರೋಪಿಗಳ ಮೇಲೆ ಸರಿಯಾದ ಕಲಂಗಳ ಅಡಿಯಲ್ಲಿ ಕೇಸು ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ, ಇನ್ನು ಜಾತಿ ದೌರ್ಜನ್ಯ ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ದಲಿತ ಮಹಿಳಾ ವೇದಿಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ)ಕಾಯ್ದೆ 1989ರ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿಯ ರಾಜ್ಯ ಸಂಚಾಲಕಿ ಯಶೋದಾ ಪಿ. ತಿಳಿಸಿದ್ದಾರೆ.
ಮಂಗಳವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಮೇಲೆ ದೌರ್ಜನ್ಯ ಆದಾಗ ಸರಿಯಾದ ಕೇಸು ದಾಖಲಿಸುವಾಗ ಕಾಯ್ದೆಗಳ ಕುರಿತಾಗಿ ಅಧಿಕಾರಿಗಳಿಗೆ ಮಾಹಿತಿ ಗೊತ್ತಿದ್ದರೂ, ನಿರ್ಲಕ್ಷ್ಯವಹಿಸುತ್ತಾರೆ. ಅಲ್ಲದೆ, ರಾಜ್ಯದಲ್ಲಿ ದಲಿತರ ಮೇಲೆ ಭೂಮಿಗೆ ಸಂಬಂಧಿಸಿದಂತೆ ಜಾತಿ ನಿಂದನೆಯ ಕೇಸುಗಳು ಕೂಡ ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
ದಲಿತರ ಹಕ್ಕುಗಳ ರಕ್ಷಣೆಯಾಗಬೇಕು, ದಲಿತರ ಮೇಲೆ ದೌರ್ಜನ್ಯ, ಜಾತಿ ನಿಂದನೆಗಳು ಕಡಿಮೆಯಾಗಬೇಕು, ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕೆಂಬ ಉದ್ದೇಶ ನಮ್ಮ ಸಂಘಟನೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಿಲ್ಲಾ ಘಟಕದಳ ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ದಲಿತರಿಗೆ ಹಕ್ಕುಗಳು ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿ, ಜಿಲ್ಲಾ ಘಟಕಗಳನ್ನು ರಚಿಸಿ, ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ 1989 ಮತ್ತು ನಿಯಮಗಳ 1995 ಸಮರ್ಪಕವಾಗಿ ಜಾರಿಗೆ ಬರುವಂತೆ 2007ರಿಂದಲೂ ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ, ಇದು ರಾಜ್ಯದ 21 ಜಿಲ್ಲೆಗಳಲ್ಲಿ ಕೆಡಿಎಂವಿ ಜೊತೆಗೆ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ ಎಂದು ಸಂಘಟನೆಯ ಕಾರ್ಯನಿರ್ವಹಣೆಯ ಬಗ್ಗೆ ತಿಳಿಸಿದರು. ಈಗಾಗಲೇ ದಲಿತರ ಹಕ್ಕುಗಳ, ರಕ್ಷಣೆಯ ಕುರಿತಾಗಿ ಸಂಬಂಧ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಎರಕಲ್ ಸ್ವಾಮಿ, ಸಮತಾ ಸೈನಿಕ ದಳದ ಕೆ. ಪೃಥ್ವಿರಾಜ್ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement