ಬಯಲಾಟ ಕಲೆ ಬೆಳೆಯಲು ರೈತರ ಪಾತ್ರ ಅಪಾರ
ಬಳ್ಳಾರಿ: ಈ ಭಾಗದಲ್ಲಿ ಬಯಲಾಟವು ಅತ್ಯಂತ ಪ್ರಮುಖ ಕಲೆಯಾಗಿದ್ದು, ಇಂಥ ಕಲೆಯನ್ನು ಕಟ್ಟಿ ಬೆಳೆಸುವಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ರೈತರ ಪಾತ್ರ ದೊಡ್ಡದು ಎಂದು ಬಯಲಾಟ -ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಬೆಳಗಲ್ ವೀರಣ್ಣ ಹೇಳಿದರು. ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ವೀರಭದ್ರೇಶ್ವರ ಕೃಪಾಪೋಷಿತ ಕರ್ನಾಟಕ ನಾಟಕ ಮಂಡಳಿ ವತಿಯಿಂದ ಗ್ರಾಮ ಕೋಟೆ ಕುಟುಂಬದ ವತಿಯಿಂದ ಏರ್ಪಡಿಸಿದ್ದ ಧರ್ಮಾಶ್ವಮೇಧಯಾಗ ಅರ್ಥಾತ್ ಸುಧನ್ವ ಕಾಳಗ ಬಯಲಾಟ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇಂದಿಗೂ ಬಯಲಾಟ ಕಲೆ ಉಳಿಸಿಕೊಂಡು ಹೋಗುತ್ತಾ, ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಹಣವನ್ನು ಖರ್ಚು ಮಾಡಿಕೊಂಡು ಬಯಲಾಟ ಕಲೆಯನ್ನು ತೊಡಗಿಸಿಕೊಂಡು ಕಲೆಯನ್ನು ಉಳಿಸಿಕೊಂಡು ಮುಂದೆ ಸಾಗಿದ್ದಾರೆ ಎಂದರು. ಇಲ್ಲಿ ಒಂದೇ ಕುಟುಂಬದವರು ಬಯಲಾಟ ಆಡುತ್ತಿರುವುದು ವಿಶೇಷವಾಗಿದೆ. ಸರ್ಕಾರದ ಬೆಂಬಲವೂ ಇದಕ್ಕೆ ಬೇಕು. ಇನ್ನು ಹೆಚ್ಚಿನ ಮಟ್ಟದಲ್ಲಿ ರೈತರು ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಪೋಷಿಸಿ, ಬೆಳೆಸಬೇಕಾಗಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಮಾತನಾಡಿದರು. ತಾಪಂ ಅಧ್ಯಕ್ಷ ಗಾದಿಲಿಂಗಪ್ಪ, ಗುರುಲಿಂಗನಗೌಡ, ಅಸುಂಡಿ ನಾಗರಾಜ್ ಗೌಡ, ಓಬಳೇಶಿ ಇದ್ದರು.
ಬೇರೆಯವರಿಗೆ ಬೆಳಕಾಗಿ: ಸ್ವಾಮೀಜಿ
ಬಳ್ಳಾರಿ: ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಬೆಳಕು ಮೂಡಿಸಿಕೊಳ್ಳುವುದರ ಜತೆ ಜತೆಯಲ್ಲೇ ಬೇರೆಯವರ ಬದುಕಿಗೆ ದೀಪವಾಗಬೇಕು ಎಂದು ಸುಕ್ಷೇತ್ರ ಬಳಗಾನೂರಿನ ಶಿವಶಾಂತವೀರ ಮಹಾಶರಣರು ಹೇಳಿದರು. ಅವರು ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ದುಶ್ಚಟಗಳ ಭಿಕ್ಷೆ ಹಾಗೂ ಸದ್ಗುಣಗಳ ದೀಕ್ಷೆಯ ಶರಣ ಸದ್ಭಾವನಾ ಪಾದಯಾತ್ರೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಕೊಪ್ಪಳ ಗವಿಮಠದ ಸಿದ್ಧಲಿಂಗ ದೇವರು ಮಾತನಾಡಿದರು. ಸಿದ್ಧಾಪುರ ಶರಣ ಶಿವಲಿಂಗಯ್ಯ ಶಾಸ್ತ್ರಿಗಳು ಕಾರ್ಯಕ್ರಮ ನಿರ್ವಹಿಸಿದರು.