ಬಿಜೆಪಿ, ಕಾಂಗ್ರೆಸ್‌ನಲ್ಲಿ ಬೇಸತ್ತವರು ಜೆಡಿಯುನತ್ತ ಆಕರ್ಷಿತ: ನಾಡಗೌಡ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 18
ಜನತಾ ಪರಿವಾರದಿಂದ ಅನಿವಾರ್ಯ ಕಾರಣದಿಂದ ಬಿಜೆಪಿ, ಕಾಂಗ್ರೆಸ್‌ಗೆ ಹೋದವರು, ಇದೀಗ ಬೇಸರಗೊಂಡು ನಿಮ್ಮ ಜತೆ ಮಾತನಾಡುವುದಕ್ಕೆ ಮನೆಗೆ ಬರುವುದಾಗಿ ಹೇಳುತ್ತಿದ್ದಾರೆ ಎಂದು ಜೆಡಿಯು ರಾಜ್ಯಾಧ್ಯಕ್ಷ ನಾಡಗೌಡ ತಿಳಿಸಿದ್ದಾರೆ. ಬುಧವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಪರಿವಾರದಿಂದ ರಾಜಕೀಯ ಅಸ್ತಿತ್ವಕ್ಕಾಗಿ ಹೋಗಿದ್ದ ಕಾಂಗ್ರೆಸ್‌ನ ಒಬ್ಬ ಶಾಸಕ ಹಾಗೂ ಪ್ರಮುಖ ಮುಖಂಡ ಹಾಗೂ ಬಿಜೆಪಿ ಮುಖಂಡರೊಬ್ಬರು ಬೇಸರಗೊಂಡು ಜೆಡಿಯು ಬಗ್ಗೆ ಆಸಕ್ತಿ ಹೊಂದಿ ತಮ್ಮೊಂದಿಗೆ ಮಾತನಾಡುವುದಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನು ಮುಂದಿನ 3-4 ದಿನಗಳಲ್ಲಿ ಅವರೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಅವರು ಹೋದ ಮೇಲೆ ಜನತಾ ಪರಿವಾರ ಒಡೆದು ಹೋಯಿತು, ದಕ್ಷಿಣ ಕರ್ನಾಟಕದಲ್ಲಿ ದೇವೇಗೌಡ ನೇತೃತ್ವದ ಜೆಡಿಎಸ್ ಸೇರ್ಪಡೆಯಾದರೆ, ಉತ್ತರ ಕರ್ನಾಟಕದಲ್ಲಿ ಬಹುತೇಕ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೀಗ ಆಯಾ ಪಕ್ಷದ ವ್ಯವಸ್ಥೆಯನ್ನು ನೋಡಿ ಜೆಡಿಯುನತ್ತ ಆಸಕ್ತರಾಗಿದ್ದಾರೆ. ಅಲ್ಲಿಗೆ ಹೋಗಿರುವವರನ್ನು ಈಗಲೂ ವಲಸಿಗರೆಂದು ಕರೆಯುತ್ತಿದ್ದಾರೆ. ನಿತೀಶ್‌ಕುಮಾರ್, ಶರದ್ ಯಾದವ್ ಅವರನ್ನು ರಾಜ್ಯಕ್ಕೆ ಕರೆತಂದು ಜೆಡಿಯು ಸಂಘಟಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ತಿಳಿಸಿದರು. ರಾಜ್ಯದಲ್ಲಿ ಕೆಜೆಪಿ ಮತ್ತು ಬಿಎಸ್‌ಆರ್ ಪಾರ್ಟಿಗಳು ಹುಟ್ಟಿಕೊಂಡು, ಕಣ್ಮರೆಯಾದವು, ಆದರೆ ಜೆಡಿಯು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಸಾಗಿದೆ ಎಂದು ತಿಳಿಸಿದರು.