ಶಿಕ್ಷಕರಿಗೆ ಸಾಂದರ್ಭಿಕ ರಜೆ
ಬಳ್ಳಾರಿ: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂ. 20ರಂದು ಚುನಾವಣೆಯು ನಡೆಯುತ್ತಿದ್ದು, ಬಳ್ಳಾರಿ ಜಿಲ್ಲೆ ವ್ಯಾಪ್ತಿಯ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ. ಅರ್ಹ ಮತದಾರರಿಗೆ ಸೀಮಿತವಾದಂತೆ ಕಾಯಂ ಅಥವಾ ಅರೆಕಾಲಿಕ ಕೆಲಸ ನಿರ್ವಹಿಸುತ್ತಿರುವ ಎಲ್ಲ ಅರ್ಹ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ನೆಗೋಷಿಯೇಬಲ್ ಇನ್ಸ್ಸ್ಟ್ರೂಮೆಂಟ್ ಆ್ಯಕ್ಟ್ 1881, ಕಲಂ 25ರಡಿ ಮತ್ತು ರೆಪ್ರೇಜೆಂಟೇಷನ್ ಆಫ್ ಪಿಪ್ಯೂಲ್ ಆಕ್ಟ್ 1951 ಕಲಂ 135ಬಿ ಅಡಿಯಲ್ಲಿ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದ್ದಾರೆ.
ಇಂದು ಧಾರ್ಮಿಕ ಕಾರ್ಯಕ್ರಮ
ಹೊಸಪೇಟೆ: ಅರಳಿಹಳ್ಳಿ ಗುರುಪಾದದೇವರ ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ 46ನೇ ಪುಣ್ಯಸ್ಮರಣೋತ್ಸವ ಹಾಗೂ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಷಷ್ಟಬ್ದ ಆಚರಣೆ ಅಂಗವಾಗಿ ರಂಭಾಪುರಿ ವೀರಸಿಂಹಾಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವ, ವಟುದೀಕ್ಷೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ತಾಲೂಕಿನ ಮರಿಯಮ್ಮನಹಳ್ಳಿಯ ಅರಳ್ಳಿಹಳ್ಳಿ ಗುರುಪಾದದೇವರ ಮಠದಲ್ಲಿ ಜೂ. 20ರಂದು ನಡೆಯಲಿವೆ. ಜೂ. 20ರಂದು ಬೆಳಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಗುರುಸಿದ್ದೇಶ್ವರ ಸ್ವಾಮಿಗಳ ಕತೃಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಶತ ನಾಮಾವಳಿ, ದೀಕ್ಷಾ ಕಾರ್ಯಕ್ರಮ, 108 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ರಂಭಾಪುರಿ ವೀರಸೋಮೇಶ್ವರ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ಮಠಕ್ಕೆ ಆಗಮಿಸುವುದು.