ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ: ರಸ್ತೆಯೇ ಕಸದ ತೊಟ್ಟಿ

Lingaraj Badiger
Updated On : 21 Jun 2014, 11:04 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 20
ಬಳ್ಳಾರಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ಕಸದ ವಿಲೇವಾರಿ, ನೈರ್ಮಲ್ಯ ವಿಷಯದಲ್ಲಿ ನಗರಪಾಲಿಕೆಯ ಮಟ್ಟದಲ್ಲಿಯೇ ಇದೆ ಎಂಬುದು ಬೆಂಗಳೂರು ರಸ್ತೆ, ಕಮೇಲಾ ರಸ್ತೆ, ಕಾಳಮ್ಮ ಬಜಾರ್, ಛಲವಾದಿ ಓಣಿಯಲ್ಲಿ ಒಂದು ಸುತ್ತು ಹಾಕಿದರೆ ಗೊತ್ತಾಗುತ್ತದೆ. ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಅಂಗಡಿ ಮುಂಗಟ್ಟು ಮುಂದಿನ ರಸ್ತೆಯೇ ಕಸದ ತೊಟ್ಟಿಯಾಗಿವೆ, ಕಸದ ತೊಟ್ಟಿಯಲ್ಲಿ ದಾರಿಹೋಕರು, ವಾಹನಗಳು ಸಂಚರಿಸುವ ವ್ಯವಸ್ಥೆ ಬೆಂಗಳೂರು ರಸ್ತೆ, ಸುಲೇಮಾನ್ ಸ್ಟ್ರೀಟ್, ಕಮೇಲಾ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿದೆ. ಕಸದ ತೊಟ್ಟಿಗಳಿಲ್ಲದಿರುವುದರಿಂದ ರಸ್ತೆ ಬದಿಯ ಫುಟ್‌ಪಾತ್‌ಗಳು ಕಸದ ತೊಟ್ಟಿಗಳಾಗಿ, ಕಸವು ಗಾಳಿಗೆ ಮತ್ತೆ ಮನೆ ಬಾಗಿಲಿಗೆ ಸೇರುವ ವ್ಯವಸ್ಥೆ ಇಲ್ಲಿದೆ. ಜನರು ನಿತ್ಯವು ಮೂಗು ಮುಚ್ಚಿಕೊಂಡು ಜೀವನ ಸಾಗಿಸುವ ವಾತಾವರಣ ಈ ಭಾಗದ ಕೆಲವು ಕಡೆಗಳಲ್ಲಿ ಇದೆ.
ಬೆಂಗಳೂರು ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಅಂಗಡಿಯ ಮುಂದೆ ಕಸದ ತೊಟ್ಟಿ ನಿರ್ಮಾಣವಾಗಿದೆ. ಇಲ್ಲಿ ಕಸದ ಪುಟ್ಟಿ ಇಟ್ಟರೂ ಕಸ ವಿಲೇವಾರಿ, ಸ್ವಚ್ಛತೆ ಗೌಣ, ಇದರಿಂದಾಗಿ ಅಲ್ಲಿನ ಅಂಗಡಿಗಳಿಗೆ ವ್ಯಾಪಾರವಾಗದ ಪರಿಸ್ಥಿತಿ.  ಎಪಿಎಂಸಿ ಪಕ್ಕದಲ್ಲಿಯೇ ಸುಲೇಮಾನ್ ಸ್ಟ್ರೀಟ್‌ನಲ್ಲೂ ಇದೆ ಸ್ಥಿತಿ ಇದೆ. ಕೇವಲ ಒಣ ಕಸ ಇರುವುದಿಲ್ಲ, ಹಲಸಿನ ಹಣ್ಣಿನ ಕಸ ಸೇರಿದಂತೆ ಹಸಿ ಕಸವು  ದುರ್ನಾತಕ್ಕೆ ಕಾರಣವಾಗುತ್ತದೆ. ಇಲ್ಲಿ ಸ್ವಚ್ಛ ಹಾಗೂ ಸುಂದರ ಬಳ್ಳಾರಿಯ ಕಲ್ಪನೆ ಗೌಣ.

ಮೂತ್ರಾಲಯಗಳಾದ ಕಸದ ತೊಟ್ಟಿಗಳು
ಕಸದ ತೊಟ್ಟಿಗಳು, ರಸ್ತೆ ಬದಿಯಲ್ಲಿರುವ ಕಸದ ರಾಶಿಗಳು ಮೂತ್ರಾಲಯಗಳಾಗಿ ಮಾರ್ಪಟ್ಟಿವೆ. ಕಾರಣ ಕಸದ ತೊಟ್ಟಿ ಇರುವ ಕಡೆಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದಿರುವುದರಿಂದ ಕಸದ ರಾಶಿ ಇರುವ ಕಡೆಗಳಲ್ಲಿ ಸಾರ್ವಜನಿಕರು ಮೂತ್ರ ಮಾಡುವುದು ಸಾಮಾನ್ಯವಾಗಿದೆ. ಬಳ್ಳಾರಿಯ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಇದು ಸಹಜವಾಗಿಯೇ ನಗರದ ವಾತಾವರಣವನ್ನು ಹದಗೆಡಿಸುತ್ತದೆ. ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಇಂಥ ಅವ್ಯವಸ್ಥೆಯನ್ನು ಸರಿಪಡಿಸುವ ಕಾಳಜಿಯನ್ನು ಮಹಾನಗರ ಪಾಲಿಕೆ, ಸದಸ್ಯರು ತೋರಬೇಕಾಗಿದೆ.

ಇದು ನಾಲ್ಕೈದು ಓಣಿಗಳ ಪರಿಸ್ಥಿತಿ ಅಲ್ಲ, ನಗರದ ಇತರ ಭಾಗದ ಸ್ಲಂಗಳಲ್ಲಿ, ಹಿಂದುಳಿದ ಬಡಾವಣೆಗಳಲ್ಲಿ ಕಸದ ಸಮಸ್ಯೆ ಹೇಳತೀರದು, ದೂರು ಕೊಟ್ಟ ದಿನದಲ್ಲಿ ಸ್ವಲ್ಪ ದಿನಗಳ ಕಾಲ ಕಸವನ್ನು ಸರಿಯಾಗಿ ವಿಲೇವಾರಿ ಮಾಡುತ್ತಾರೆ. ಕಸ ವಿಲೇವಾರಿ ಮಾಡುವವರು ಮತ್ತದೆ ಚಾಳಿಯನ್ನು ಅನುಸರಿಸುತ್ತಾರೆ ಎಂಬ ಗೋಳು ಸಾರ್ವಜನಿಕರದ್ದಾಗಿದೆ. ಪಾಲಿಕೆಯ ಅಧಿಕಾರಿಗಳು, ಸದಸ್ಯರು ನಗರದ ಮುಂದುವರಿದ, ಕೆಲವು ಬಡಾವಣೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ, ಸ್ವಚ್ಛ ಮತ್ತು ಸುಂದರ ಬಳ್ಳಾರಿಯ ಪಾಲಿಕೆಯ ಕಲ್ಪನೆ ಈಡೇರುವುದಿಲ್ಲ. ನಗರದ ಎಲ್ಲಾ ಹಿಂದುಳಿದ, ಸ್ಲಂ ಪ್ರದೇಶಗಳು ಸ್ವಚ್ಛತೆಯನ್ನು ಕಾಯ್ದುಕೊಂಡರೆ ಮಾತ್ರ ನಗರದ ನೈರ್ಮಲ್ಯ ಸಾಧ್ಯ ಎಂಬುದನ್ನು ಅರಿಯಬೇಕಾಗಿದೆ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement