ಮುಸ್ಲಿಂ, ಕ್ರೈಸ್ತರ ಬಗ್ಗೆ ಮಾತಾಡಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ. 20
ಸಾಹಿತಿಗಳಾದ ಪ್ರೊ. ಎಂ. ಎಂ. ಕಲ್ಬುರ್ಗಿ ಹಾಗೂ ಡಾ. ಯು.ಆರ್. ಅನಂತಮೂರ್ತಿ ಅವರು ದೇವರ ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಬಹುದೆಂದು ಹೇಳಿಕೆ ನೀಡಿರುವುದಕ್ಕೆ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವರ ವಿರುದ್ಧ ಗಟ್ಟಿಯಾಗಿ ಉತ್ತರ ನೀಡದೇ ಹೋದರೆ ಇಂಥ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇವರಿಗೆ ತಾಕತ್ ಇದ್ದರೆ ಮುಸ್ಲಿಂ, ಕ್ರೈಸ್ತ್, ಸಿಖ್ ಧರ್ಮದ ಬಗ್ಗೆ ಮಾತನಾಡಲು ಎಂದು ಸವಾಲು ಹಾಕಿದರು.
ಅವರು ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಶುಕ್ರವಾರ ನಡೆದ ಅರಳಿಹಳ್ಳಿ ಗುರುಪಾದದೇವರ ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ 46ನೇ ಪುಣ್ಯಸ್ಮರಣೋತ್ಸವ ಹಾಗೂ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಷಷ್ಟಬ್ದಿ ಆಚರಣೆ ಅಂಗವಾಗಿ ವಟುದೀಕ್ಷೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ ಸಮಾಜದಲ್ಲಿ ಅನೇಕ ಮಠಗಳು ವಿದ್ಯಾದಾನ ಮತ್ತು ದಾಸೋಹ ನಡೆಸುವ ಮೂಲಕ ಸಮಾಜ ಸುಧಾರಣೆಗಾಗಿ ಮತ್ತು ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ಮೂಲಕ ಇತರೆ ದೇಶಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಉಜ್ಜಯಿನಿಯ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸಿದ್ಧಲಿಂಗ ರಾಜದೇಶೀ ಕೇಂದ್ರ ಭಗವತ್ಪಾದವರು ಮಾತನಾಡಿದರು. ಮರಿಯಮ್ಮನಹಳ್ಳಿಯ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ನಡೆಯಿತು. ನಂತರ 13 ಜೋಡಿ ವಿವಾಹ ನಡೆಯಿತು. ಗುರುಪಾದದೇವರ ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ತುಲಭಾರ ಕಾರ್ಯಕ್ರಮ ನಡೆಯಿತು.