ವಿಧಾನಸೌಧಕ್ಕೆ ರೈತರ ಮುತ್ತಿಗೆ 23ರಂದು
ಕೊಟ್ಟೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಚನ ಭ್ರಷ್ಟತೆ ವಿರುದ್ಧ ವಿಧಾನಸೌಧಕ್ಕೆ ರೈತರು ಬೃಹತ್ ಸಂಖ್ಯೆಯಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸುವ ಕಾರ್ಯಕ್ರಮ ಜೂ. 23ರಂದು ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿ. ಭರಮಣ್ಣ, ತಾಲೂಕು ಅಧ್ಯಕ್ಷ ಜಂಬೂರು ಮರುಳ ಸಿದ್ದಪ್ಪ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೃಷಿ ಬೆಲೆ ಆಯೋಗದಲ್ಲಿ ರೈತ ಸಂಘದ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಬೇಕು. ಕಬ್ಬಿನ ಬಾಕಿ ಉಳಿದಿರುವ ಹಣ ಕಾರ್ಖಾನೆಯವರಿಂದ ಪ್ರತಿ ಟನ್ ರು. 2500 ಗಳನ್ನು ಶೇಕಡಾ 18ರ ಬಡ್ಡಿ ದರದಂತೆ ಕೊಡಿಸಬೇಕು ಇಲ್ಲವೇ ಸರ್ಕಾರವೇ ನೀಡಬೇಕು. ಎಂಬ ಬೇಡಿಕೆ ಸೇರಿದಂತೆ ಇತರ 14 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು. ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ಕೊಟ್ಟೂರು ಭಾಗದಿಂದ ನೂರಾರು ಸಂಖ್ಯೆಯ ರೈತರು ತೆರಳಲಿದ್ದು, 21 ರಂದು ಕೊಟ್ಟೂರಿನಿಂದ ಹರಿಹರಕ್ಕೆ ತೆರಳುವ ರೈಲಿನಲ್ಲಿ ಪ್ರಯಾಣಿಸಲು ಎಲ್ಲಾ ಬಗೆಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.