ಸಂತೆ ಮಾರುಕಟ್ಟೆ ಅಕ್ರಮ ಕಟ್ಟಡ ತೆರವಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 20
ಪಟ್ಟಣದ ಸಂತೆ ಮಾರುಕಟ್ಟೆ ಜಾಗದಲ್ಲಿ ಸಾಕಷ್ಟು ಅಕ್ರಮ ಕಟ್ಟಡಗಳು ಮತ್ತು ಅನಧಿಕೃತ ಗುಡಿಸಲುಗಳನ್ನು ತೆರವುಗೊಳಿಸಬೇಕೆಂದು ಪಟ್ಟಣದ ನಿವಾಸಿಗಳು ಪುರಸಭೆಗೆ ಮನವಿ ಪತ್ರ ನೀಡಿದ್ದಾರೆ.
ಮನೆ ಬಾಗಲಿಗೆ ಪುರಸಭೆ ಆಡಳಿತ ಎಂಬ ವಿನೂತನ ಕಾರ್ಯಕ್ರಮವು ಪಟ್ಟಣದ 17ನೇ ವಾರ್ಡ್ಗೆ ಆಗಮಿಸಿರುವ ಸಂದರ್ಭದಲ್ಲಿ ಶುಕ್ರವಾರ ಬಿ. ಫಕ್ರುದ್ದೀನ್, ಚಿದಾನಂದ, ಕೋಟೆಪ್ಪ, ಧರ್ಮಣ್ಣ ಕೆ., ಮಾಹಬುನ್ನಿ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ವಾರದ ಸಂತೆ ಮಾರುಕಟ್ಟೆ ನಿವೇಶನದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಹಾಗೂ ಬಡವರು ನಿರ್ಮಿಸಿಕೊಂಡಿರುವ ಗುಡಿಸಲುಗಳಿಂದ ಸಂತೆ ಮಾರುಕಟ್ಟೆಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಅನಧಿಕೃತ ಕಟ್ಟಡ ಮತ್ತು ಗುಡಿಸಲುಗಳನ್ನು ತೆರವುಗೊಳಿಸಬೇಕು, ಬಡವರಿಗೆ ಆಶ್ರಯ ಯೋಜನೆಯಡಿ ವಸತಿಗಳನ್ನು ನೀಡುವ ಮೂಲಕ ಅವರನ್ನು ತೆರವುಗೊಳಿಸಬೇಕು, ಶಾಶ್ವತವಾಗಿ ಸಂತೆ ಜಾಗದಲ್ಲಿ ಗುಡಿಸಲು ಮುಕ್ತ ಮಾಡಬೇಕೆಂದು ತಿಳಿಸಿದ್ದಾರೆ.
ಸಂತೆ ಮಾರುಕಟ್ಟೆ ಜಾಗದಲ್ಲಿ ನಿರ್ಮಾಣ ಮಾಡಿರುವ ಪುರುಷರ ಶೌಚಾಲಯಗಳನ್ನು ದುರಸ್ತಿಗೊಳಿಸಿ ಸ್ವಚ್ಛತೆ ಜತೆಗೆ ನೀರಿನ ವ್ಯವಸ್ಥೆ ಮಾಡಬೇಕು, ಸಂತೆ ಮಾರುಕಟ್ಟೆ ನಿವೇಶನವನ್ನು ನಿರ್ದಿಷ್ಟವಾಗಿ ಅಳತೆ ಮಾಡಿಸಿ ಸುತ್ತಲೂ ರಕ್ಷಣಾ ಗೋಡೆ ನಿರ್ಮಾಣ ಹಾಗೂ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.