ತುಂಗಭದ್ರಾ ಕಾಲುವೆ ಕುಸಿದು ಇಬ್ಬರು ಕಾರ್ಮಿಕರ ಸಾವು
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ. 23
ತುಂಗಭದ್ರಾ ಕೆಳಮಟ್ಟದ ಕಾಲುವೆ (ಎಲ್‌ಎಲ್‌ಸಿ) ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ತೀವ್ರ ಗಾಯಗೊಂಡಿರುವ ಘಟನೆ ನಗರದ ರೇಲ್ವೆ ಸ್ಟೇಶನ್ ರಸ್ತೆಯ ಸಮೀಪದಲ್ಲಿ ಸೋಮವಾರ ಸಂಜೆನಡೆದಿದೆ.
ತಾಲೂಕಿನ ಕಮಲಾಪುರದ ನಿವಾಸಿಗಳಾದ ದಾದಾಪೀರ್ (30), ಜಿಲಾನ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಫಯಾಜ್ (22) ತೀವ್ರ ಗಾಯಗೊಂಡಿದ್ದು, ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ ಮೂಲಕ ನೀರು ಹರಿದು ಬಿಡುತ್ತಿರುವುದರಿಂದ ಪ್ರತಿ ವರ್ಷವೂ ಕಾಲುವೆ ದುರಸ್ತಿ ನಡೆಯುತ್ತದೆ. ಈ ವರ್ಷ ಸಹ ಕಾಲುವೆ ದುರಸ್ತಿ ನಡೆಯುತ್ತಿತ್ತು. ಈ ವೇಳೆ ಕಾಲುವೆಯ ಮಣ್ಣು ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಸತ್ತಿದ್ದಾರೆ. ನಗರದ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.