ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಲಿಕೆ ಜತೆಗೆ ಗ್ರಾಮೀಣರಲ್ಲಿಅರಿವು ಮೂಡಿಸಿ: ರಮೇಶ್

Vishwanath S
Updated On : 2 Mar 2014, 11:43 am

ಸಂಡೂರು: ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಕಲಿಕೆಯ ಜತೆಗೆ ಗ್ರಾಮೀಣ ಜನರ ಬದುಕು ಬವಣೆ  ಅರಿತು, ಅವರ ಸಾಮಾಜಿಕ ಸಮಸ್ಯೆಗಳಾದ ಸ್ವಚ್ಛತೆ ಕೊರತೆ ಮತ್ತು ಆರೋಗ್ಯದ ಕಡೆ ಅರಿವು ಮೂಡಿಸುವ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಭಾಗವಾಗಿರುವುದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಓಲೇಕರ್ ತಿಳಿಸಿದರು. ತಾಲೂಕಿನ ಕಾಳಿಂಗೇರಿ ಗ್ರಾಮದಲ್ಲಿ ಶುಕ್ರವಾರ ಸಮಾಜ ಕಾರ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಗೌರಿ ಮಾನಸ ಶಿಬಿರ ಯಶಸ್ವಿಗೆ ಮನವಿ ಮಾಡಿದರು. ಡಾ. ಪವಿತ್ರಾ ಆಲೂರು ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಯೋಜಕಿ ಸುಮಾ, ಬಿಲ್ವಾರ್ ಕದಿರಮ್ಮ, ಎಸ್. ಕುಮಾರ್, ದಾಸನಾಯಕರ ಹನುಮಂತಪ್ಪ, ಸದಸ್ಯ ತಿಪ್ಪೇಸ್ವಾಮಿ, ನಾಗರಾಜ, ಹುಲಿಕುಂಟೆಪ್ಪ, ರಾಜಪ್ಪ ಮಹಾಂತೇಶ್, ಪ್ರಕಾಶ್ ನಾಯ್ಕ್ ಇದ್ದರು.

ಇಂದು ಛಲವಾದಿ ಮಹಾಸಭಾ ರಾಜ್ಯ ಮಟ್ಟದ ಸಮಾವೇಶ
ಬಳ್ಳಾರಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾ. 2ರಂದು ಜರುಗಲಿರುವ ಛಲವಾದಿ ಮಹಾಸಭಾದ ರಾಜ್ಯಮಟ್ಟದ 3ನೇ ಮಹಾ ಸಮಾವೇಶದಲ್ಲಿ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಬಾಂಧವರು ಭಾಗವಹಿಸಬೇಕು ಎಂದು ಛಲವಾದಿ ಮಹಾಸಭಾದ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಈಶ್ವರ್ರಾವ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂದು ಬೆಳಗ್ಗೆ 10ಕ್ಕೆ ಸಮಾವೇಶ ಆರಂಭವಾಗಲಿದ್ದು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ. ಪರಮೇಶ್ವರ್, ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಮುದಾಯದ ಪ್ರಮುಖರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗ ತರಬೇತಿಕಾರ್ಯಾಗಾರಕ್ಕೆ ಚಾಲನೆ
ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಹಾಗೂ ನಗರದ ತಾರಾನಾಥ ಆಯುರ್ವೇದ ಕಾಲೇಜಿನಲ್ಲಿ ರಂಗ ತರಬೇತಿ ಕಾರ್ಯಾಗಾರಕ್ಕೆ ಈಚೆಗೆ ಚಾಲನೆ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಜಂಗಮ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಾಗಾರವನ್ನು ರಂಗ ಕಲಾವಿದ ರಮೇಶ್ಗೌಡ ಪಾಟೀಲ್ ಉದ್ಘಾಟಿಸಿ ಮಾತನಾಡಿದರು. ಶಿವೇಶ್ವರಗೌಡ ಕಲ್ಲುಕಂಬ, ಅಧ್ಯಕ್ಷತೆ ವಹಿಸಿದ್ದ ತಾರಾನಾಥ್ ಕಾಲೇಜು ಪ್ರಾಚಾರ್ಯ ಡಾ. ಜೆ.ಆರ್. ವಸ್ತ್ರದ್, ಉಪನ್ಯಾಸಕ ಡಾ.ಆರ್. ರವಿ ಚವ್ಹಾಣ, ಡಾ.ಎ.ಎಸ್. ಪಾಟೀಲ್ ದೊಡ್ಡಬಸಪ್ಪ, ಸಂಸ್ಥೆಯ ಖಜಾಂಚಿ ಅಣ್ಣಾಜಿ ಕೃಷ್ಣಾರೆಡ್ಡಿ, ಡಾ. ಮಹೇಶ್ವರಿ, ಡಾ. ಬಿರಾದಾರ ಇದ್ದರು.

ಮೂಲ ವಿಜ್ಞಾನವಿಲ್ಲದೆ ತಂತ್ರಜ್ಞಾನ ಬೆಳವಣಿಗೆ ಇಲ್ಲ
ಬಳ್ಳಾರಿ: ಮೂಲ ವಿಜ್ಞಾನವಿಲ್ಲದೆ ತಂತ್ರಜ್ಞಾನ ಬೆಳವಣಿಗೆ ಅಸಾಧ್ಯ. ಆದ್ದರಿಂದ ಮೂಲ ವಿಜ್ಞಾನ ಕಡೆಗೆ ಪಿಯುಸಿ ಬಳಿಕ ವಿಜ್ಞಾನ ಹೆಚ್ಚು ವಿದ್ಯಾರ್ಥಿಗಳು ಒಲವು ತೋರುತ್ತಿದ್ದಾರೆ ಎಂದು ಬಸವರಾಜೇಶ್ವರಿ ಪಬ್ಲಿಕ್ ಶಾಲೆ ಪ್ರಾಚಾರ್ಯ ಕೆ. ಹರಿಕುಮಾರ್ ತಿಳಿಸಿದರು.  ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ವಿಜ್ಞಾನ ದಿನಾಚರಣೆ ನಿಮಿತ್ತ ವಿಜ್ಞಾನ ಸಂಘ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ಗಳಿಗೆ ಹೆಚ್ಚು ಆಸಕ್ತರಾಗುತ್ತಿದ್ದರು. ಆದರೆ ಸಧ್ಯ ಮೂಲ ವಿಜ್ಞಾನದ ಕಡೆಗೆ ಒಲವು ತೋರಿ ಅಧ್ಯಯನದಲ್ಲಿ ತೊಡಗುತ್ತಿದ್ದಾರೆ. ಸಾಂಪ್ರದಾಯಿಕ ವಿಜ್ಞಾನಗಳ ಅಧ್ಯಯನಕ್ಕೆ ಎಲ್ಲ ಕಾಲಕ್ಕೂ ಬೇಡಿಕೆ ಇದೆ ಎಂದರು. ಡಿ. ಗಂಗಣ್ಣ, ಪ್ರೊ. ನಾಗರಾಜರಾವ್, ಎಚ್. ತಾಯಪ್ಪ, ಹನುಮೇಶ್ ವೈದ್ಯ, ಹರೀಶ್ ಗುಜ್ಜಾರ್, ಡಾ. ಕುಂಚಂ ನರಸಿಂಹಲು, ಗಂಗಾ ಶಿರೀಷಾ, ರೇಣುಕಾ, ಸುಮಲತಾ, ಪಂಚಾಕ್ಷರಿ ಇತರರಿದ್ದರು.

ಆರೋಗ್ಯ ಜಾಗೃತಿಗೆ ಜಲಜನಕ ಬಲೂನ್: ಡಾ. ಶಂಕರ್ನಾಯ್ಕ
ಹೊಸಪೇಟೆ: ಜನರಲ್ಲಿ ಆರೋಗ್ಯದ ಅರಿವು ಮೂಡಿಸಲು ಜನದಟ್ಟಣೆ ಪ್ರದೇಶದಲ್ಲಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಿಂದ ಜಲಜನಕ ಬಲೂನ್ ಹಾರಿ ಬಿಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಶಂಕರ್ ನಾಯ್ಕ ಹೇಳಿದರು. ನಗರಸಭೆಯಲ್ಲಿ ಶನಿವಾರ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯ ಜಾಗೃತಿ ಸಾರುವ ಸಂದೇಶಗಳನ್ನು ಬಲೂನ್ ಮೇಲೆ ಬರೆದು ಆಕಾಶದಲ್ಲಿ ಬಿಡುವುದರಿಂದ ಜನ ಈ ಬಲೂನ್ ನೋಡಿ ಸಂದೇಶಗಳನ್ನು ಅರ್ಥೈಸಿಕೊಳ್ಳುತ್ತಾರೆ. 10 ದಿನ ಬಲೂನ್ ಹಾರಿ ಬಿಡಲಾಗುತ್ತಿದೆ ಎಂದರು. ಡಾ. ಎರ್ರಿಯಪ್ಪ, ಮಹ್ಮದ್ ಮುನೀರ್, ಎಂ.ಪಿ. ದೊಡ್ಡಮನಿ, ಎಸ್.ಕೆ. ಸ್ವಾಮಿ, ನಗರಸಭೆ ಅಧಿಕಾರಿ ಟಿ. ಮಂಜುನಾಥ ಇದ್ದರು.

ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿ: ಮಂಜುನಾಥ
ಬಳ್ಳಾರಿ: ಮಕ್ಕಳು ಆರಂಭಿಕ ಹಂತದಲ್ಲಿ ವಿಜ್ಞಾನದಲ್ಲಿ ಆಸಕ್ತಿ ತೋರಬೇಕು. ಇದಕ್ಕೆ ತಕ್ಕಂತೆ ಶಿಕ್ಷಕರೂ ಅವರಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಪ್ರಯೋಗಗಳ ಮೂಲಕ, ವಿಜ್ಞಾನಿಗಳ ಕಥೆ ಹೇಳುವ ಮೂಲಕ ತಿಳಿಸಿಕೊಡಬೇಕೆಂದು ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಎಸ್. ಮಂಜುನಾಥ ಅಭಿಪ್ರಾಯಪಟ್ಟರು. ನಗರದ ಹೀರದ ಸೂಗಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಆರ್. ತಾರನಾಥ್, ತಿಪ್ಪೇಸ್ವಾಮಿ, ಸಿದ್ದಪ್ಪ, ಮರಿಸ್ವಾಮಿ, ಟಿ. ಜಿತೇಂದ್ರ, ರಘು, ವಿದ್ಯಾರ್ಥಿಗಳು ಇದ್ದರು. ಮೃತ್ಯುಂಜಯ ಸ್ವಾಗತಿಸಿದರು. ಜಯಂತಿ ನಿರೂಪಿಸಿದರು. ವರಲಕ್ಷ್ಮೀ ವಂದಿಸಿದರು.

ಮೇಟ್ರಿ: ವಿಜೃಂಭಣೆಯಈಶ್ವರ ದೇವರ ರಥೋತ್ಸವ
ಕಂಪ್ಲಿ: ಪಟ್ಟಣಕ್ಕೆ ಸಮೀಪದ ಮೆಟ್ರಿ ಗ್ರಾಮದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಈಶ್ವರ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ದೇವಸ್ಥಾನದಿಂದ ಬಸವಣ್ಣ ಪೇಟೆ, ಬಸವಣ್ಣ ದೇವಸ್ಥಾನದವರೆಗೆ ತೆರಳಿ ಪುನಃ ಸ್ವಸ್ಥಾನಕ್ಕೆ ಬಂದು ರಥ ತಲುಪಿತು. ವಿವಿಧ ವಾದ್ಯಗಳು ಭಕ್ತರ ಗಮನ ಸೆಳೆದವು. ರಥೋತ್ಸವ ಅಂಗವಾಗಿ ಈಶ್ವರ ಮೂರ್ತಿಗೆ ಮಹಾರುದ್ರಾಭೀಷೇಕ, ಶಿವಾರ್ಚನೆ, ಗಂಗೆಸ್ಥಳ, ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಜರುಗಿದವು. ಹರಗಿನಡೋಣಿ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಚೇಳ್ಳಗುರ್ಕಿ ಎರ್ರಿತಾತಾನವರ ಪುರಾಣ ಮಹಾ ಮಂಗಲಗೊಂಡಿತು. ವೇದಮೂರ್ತಿ ಸೋಮಯ್ಯಶಾಸ್ತ್ರಿ ಪುರಾಣ ಪ್ರವಚನ ನೀಡಿದರು. ಗ್ರಾಮಸ್ಥರಿದ್ದರು.

ಬಳ್ಳಾರಿ: ನಂದಿನಿ ಹಾಲಿನ ಜಾಗೃತಿ ಶಿಬಿರ
ಬಳ್ಳಾರಿ: ಮಕ್ಕಳ ಮಂಟಪ ಶಾಲೆ ಆರ್.ಟಿ.ಜಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಬಳ್ಳಾರಿಯ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದಿಂದ ನಂದಿನಿ ಹಾಲಿನ ಕುರಿತ ಜಾಗೃತಿ ಶಿಬಿರ ನಡೆಯಿತು. ರಾ.ಬ.ಕೊ. ಎಂಡಿ ಆರ್. ಸುರೇಶ್ಕುಮಾರ್ ಮಾತನಾಡಿ, ಪ್ಯಾಶ್ಚರೀಕರಿಸಿದ ಉತ್ಕೃಷ್ಟ ಗುಣಮಟ್ಟದ ಹಾಲು ಸೇವಿಸುವುದರಿಂದ ಮಕ್ಕಳಲ್ಲಿ ಆರೋಗ್ಯ, ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಖಾಸಗಿ ಹಾಲು ದೊರಕುತ್ತಿದ್ದು, ಖರೀದಿಸುವಾಗ ಎಚ್ಚರಿಕೆ ವಹಿಸಿ ಎಂದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕವಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎರ್ರಿಸ್ವಾಮಿ ರೆಡ್ಡಿ, ಐ.ಎನ್. ಮುರುಳೀಧರ್, ವಿ. ನಾಗರಾಜ್ ಶರ್ಮಾ, ಟಿ. ಮಲ್ಲಿಕಾರ್ಜುನ, ಶಾಲೆ ಮುಖ್ಯಗುರು ವಾದಿರಾಜ್, ಶೀಲಾ, ಫರೀದಾ, ವಿದ್ಯಾರ್ಥಿಗಳು ಇದ್ದರು. ಹಾಲು, ಹಾಲಿನ ಉತ್ಪನ್ನಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಂಗ್ರೆಸ್ ಸೇವಾದಳ ನೂತನ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸೇವಾದಳಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಮಹೇಂದ್ರ ಜೋತಿ ಹಾಗೂ ಅಖಿಲ ಕರ್ನಾಟಕ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ವಿ.ಎಚ್. ಭೀಮಾಶಂಕರ್ ಅವರ ನಿರ್ದೇಶನದಂತೆ ಜಿಲ್ಲಾಧ್ಯಕ್ಷ ಕೆ.ಬಿ. ಅಂಜಿನಿ ನೇಮಿಸಿದ್ದಾರೆ. ಜಿಲ್ಲಾ ಸಂಘಟಕ ಕಾರ್ಯದರ್ಶಿಗಳಾಗಿ ಕೆ.ಎಸ್. ರಾಘವೇಂದ್ರ, ಮೇಟಿ ದಿವಾಕರ್, ದಮ್ಮೂರು ನಾಗಪ್ಪ, ಬಿ. ಬಸವರಾಜ, ವೀರಾಪುರ ಶ್ರೀನಿವಾಸ್, ಜಿಲ್ಲಾ ಸಂಘಟಕರಾಗಿ ನೂರ್ಮಹ್ಮದ್, ಬ್ಲಾಕ್ ಮುಖ್ಯ ಸಂಘಟಕರಾಗಿ ಭಾಸ್ಕರ್, ಅಜಿ ಸೈಯದ್ ಇಲಿಯಾಸ್, ಜೆ.ಕೆ. ವಿಜಯಕುಮಾರ್, ಚಂದ್ರಶೇಖರ್ ನೇಮಕವಾಗಿದ್ದಾರೆ.

ಸಡಗರದಿಂದ ನಡೆದ ಕಾಗನೂರು ಜಾತ್ರೆ
ಹೂವಿನಹಡಗಲಿ:  ತಾಲೂಕಿನ ಕಾಗನೂರು ಶ್ರೀ ಶಿವಲಿಂಗೇಶ್ವರ ರಥೋತ್ಸವ ಸಡಗರ-ಸಂಭ್ರಮದಿಂದ ಶಿವರಾತ್ರಿಯ ದಿನ ನಡೆಯಿತು. ರಥೋತ್ಸವಕ್ಕೆ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. 10-20 ವರ್ಷಗಳಿಂದ ಜಾತ್ರೋತ್ಸವ ಸ್ಥಗಿತಗೊಂಡಿತ್ತು. 4 ವರ್ಷಗಳ ಹಿಂದೆ ಹಿರೇಕಲ್ಮಠ ಹೊನ್ನಾಳಿ-ಪುರ ವರ್ಗ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀ ಸಾನ್ನಿಧ್ಯದಲ್ಲಿ ಜಾತ್ರೆಗೆ ಮತ್ತೆ ಚಾಲನೆ ನೀಡಲಾಗಿತ್ತು. ಇಸ್ಪೀಟ್, ಮಟ್ಕಾ, ಮದ್ಯ, ತತ್ತಿ, ಮಾಂಸ ಮಾರಾಟ ಮಾಡಬಾರದು. ಮಾರಿದರೆ ರು. 10 ಸಾವಿರ ದಂಡ ವಿಧಿಸುವುದು. ಹೀಗಾದರೆ ಜಾತ್ರೆ ಮಾಡುವಂತೆ ಗ್ರಾಮಸ್ಥರು ನಿರ್ಧರಿಸಿದಾಗ ಸಡಗರದಿಂದ ಜಾತ್ರೆ ಮಾಡುತ್ತಿದ್ದಾರೆಂದು ಗುರುಪಾದ ಸ್ವಾಮಿ ತಿಳಿಸಿದ್ದಾರೆ.

ಕೆಎಂಎಫ್ನ ಐಸ್ಕ್ರೀಂ ಮಾರಾಟ ಮಳಿಗೆಗೆ ಚಾಲನೆ
ಬಳ್ಳಾರಿ: ಸ್ಥಳೀಯ ಗಾಂಧಿನಗರ ಪ್ರದೇಶದಲ್ಲಿನ ಮೋಕಾ ರಸ್ತೆಯಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಉತ್ಪನ್ನದ ಐಸ್ಕ್ರೀಂ ಮಾರಾಟ ಮಳಿಗೆಯನ್ನು ಕೆಎಂಎಫ್ ರಾಜ್ಯಾಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೆಎಂಎಫ್ ವತಿಯಿಂದ ಐಸ್ಕ್ರೀಂ ಉತ್ಪನ್ನ ಘಟಕ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನು ಹೆಚ್ಚಿನ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದರು. ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಮಾಜಿ ಸದಸ್ಯೆ ಶಶಿಕಲಾ, ಕೆಎಂಎಫ್ ಎಂಡಿ ಸುರೇಶ್ಕುಮಾರ್, ಸತ್ಯನಾರಾಯಣ, ಶಶಿಧರ, ಬಿ.ವಿ. ರೆಡ್ಡಿ, ಸುದರ್ಶನ ರೆಡ್ಡಿ, ವೀರಶೇಖರ ರೆಡ್ಡಿ, ನರಸಿಂಹರೆಡ್ಡಿ ಇದ್ದರು.

ಕರ ಪಾವತಿಸಿದರೆ 24 ತಾಸು ಶುದ್ಧ ನೀರು: ಮಹೇಶ್
ಹೊಸಪೇಟೆ: ನೀರಿನ ಸಂಪರ್ಕಕ್ಕೆ ಪರವಾನಗಿ ಪಡೆದು ಪ್ರತಿ ತಿಂಗಳು ಕರ ಪಾವತಿಸಿದರೆ ದಿನದ 24 ತಾಸು ಶುದ್ಧ ಕುಡಿಯುವ ನೀರನ್ನು ಪೂರೈಸಲು ಮುಂದಾಗುತ್ತೇವೆ ಎಂದು ಮೈರಾಡ ಸಂಸ್ಥೆಯ ಪಿಆರ್ಒ ಮಹೇಶ್ ಹೇಳಿದರು. ನಗರದ ಚಿತ್ತವಾಡ್ಗಿಯ ಈಶ್ವರ ದೇವಸ್ಥಾನದಲ್ಲಿ ಮೈರಾಡ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ನೀರು, ಒಳಚರಂಡಿ ಸಂಪರ್ಕ ಹಾಗೂ ನೀರಿನ ದರ ಪಾವತಿ ತಿಳಿವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡೊಮ್ಮಿ ಜಂಬಣ್ಣ ಮಾತನಾಡಿ, ಕರ ಪಾವತಿಗೆ ಜನರು ಸಿದ್ಧರಿದ್ದಾರೆ. ನಗರಸಭೆ ಅಧಿಕಾರಿಗಳು ಕರ ಕಟ್ಟಿಸಿಕೊಳ್ಳಲು ಬರುತ್ತಿಲ್ಲ. 24 ತಾಸು ನೀರು ಕೊಟ್ಟರೆ ತಿಂಗಳಿಗೆ ರು. 120 ಪಾವತಿಗೆ ಜನ ಸಿದ್ಧ. ಯೋಜನೆ ಜಾರಿಗೊಳಿಸಿ ಎಂದರು. ಡೊಮ್ಮಿ ಹನುಮಂತಪ್ಪ, ಪಿ. ಮಲ್ಲಿಕಾರ್ಜುನ, ಮೊರಿಗೇರಿ ಕೊಟ್ರಪ್ಪ, ಗಿಣಿಗೇರಿ ಅಶೋಕ್, ಬಸವರಾಜ್, ಜಿ. ಯಮನೂರ, ವೆಂಕೋಬಿ, ವೆಂಕಟೇಶ್, ಹಿರೇಮಠ್, ಮಲ್ಲಯ್ಯ ಹೀರೇಮಠ್, ಹಸೀನಾ, ಶಿವರುದ್ರಮ್ಮ, ಗಿರೀಶ್ ಇತರರಿದ್ದರು.

ಹೊಸಹಳ್ಳಿ: ಇಂದು ಕನ್ನಡ ಭವನ ಉದ್ಘಾಟನೆ
ಕೂಡ್ಲಿಗಿ: ತಾಲೂಕಿನ ಹೊಸಹಳ್ಳಿಯಲ್ಲಿ ಕಸಾಪ ಹೋಬಳಿ ಘಟಕದಿಂದ ಕನ್ನಡ ಭವನ ಉದ್ಘಾಟನೆ ಮಾ. 2ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಎ. ಕರಿಬಸಪ್ಪ ತಿಳಿಸಿದ್ದಾರೆ. ವಾರ್ತಾ ಇಲಾಖೆ ನಿವೃತ್ತ ಉಪನಿರ್ದೇಶಕ ಬಿ.ಎಂ. ಚಂದ್ರಶೇಖರಯ್ಯ ಉದ್ಘಾಟಿಸಲಿದ್ದು, ಕಾನಾಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ಸಾನ್ನಿಧ್ಯ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಸಿರಿಗೆರೆ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸುವರು. ನಿಷ್ಠಿ ರುದ್ರಪ್ಪ ಉದ್ಘಾಟಿಸುವರು. ಡಾ. ಮೆಹಬೂಬ್ ಅಲಿ ಅವರ ಮನದಾಳದ ಮಾತು ಕವನ ಸಂಕಲನವನ್ನು ಹಂಪಿ ಕವಿವಿ ದೂರಶಿಕ್ಷಣ ನಿರ್ದೇಶಕ ವಿರೂಪಾಕ್ಷಿ ಪೂಜಾರಹಳ್ಳಿ ಬಿಡುಗಡೆಗೊಳಿಸುವರು. ಡಾ. ವೆಂಕಟಗಿರಿ ದಳವಾಯಿ ಉಪನ್ಯಾಸ ನೀಡಲಿದ್ದಾರೆ.

ಮಾನವೀಯ ಮೌಲ್ಯ ಕಲಿಸಿ: ವಿಶ್ವರಾಧ್ಯಶ್ರೀ
ಕಂಪ್ಲಿ: ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೆ ಸಂಸ್ಕಾರ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಪಟ್ಟಣಕ್ಕೆ ಸಮೀಪದ ದೇವಸಮುದ್ರದಲ್ಲಿ ಈಚೆಗೆ ಕರಿಯಮ್ಮ ದೇವಿ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ, ಆಶೀರ್ವಚನ ನೀಡಿದರು. ಎಂ.ಎಸ್. ಶಶಿಧರ ಶಾಸ್ತ್ರಿ, ಗುರುನಾಥ, ಶಿವಯ್ಯ ತಾತ, ಕಡೆಮನಿ ದೊಡ್ಡ ಫಕ್ಕೀರಪ್ಪ, ಕರೆಗೌಡ್ರು ಫಕ್ಕೀರಪ್ಪ, ಕಡೆಮನಿ ಪಂಪಾಪತಿ, ಸೂಗೂರು ಲಕ್ಷ್ಮೀ, ಶೇಖರಪ್ಪ, ಕೆ. ಷಣ್ಮುಖಪ್ಪ, ಅಳ್ಳಳ್ಳಿ ವೀರೇಶ್, ಜಿ. ಬಸವನಗೌಡ, ಹೊಸ್ಮನಿ ಮಲ್ಲಪ್ಪ, ವಿ. ವೆಂಕಟೇಶ್, ಕಬ್ಬೇರು ತಿಪ್ಪಣ್ಣ, ವಾಲ್ಮೀಕಿ ಹೊನ್ನೂರಪ್ಪ ಇದ್ದರು.

ಸತ್ಯಂ ಇಂಟರ್ನ್ಯಾಷನಲ್ ಶಾಲೆ ವಾರ್ಷಿಕೋತ್ಸವ
ಬಳ್ಳಾರಿ: ನಗರದ ಕಪ್ಪಗಲ್ ರಸ್ತೆಯ ಸತ್ಯಂ ಇಂಟರ್ನ್ಯಾಷನಲ್ ಶಾಲೆ ವಾರ್ಷಿಕೋತ್ಸವ ಜರುಗಿತು. ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಕಾರ್ಯಕ್ರಮ ಉದ್ಘಾಟಿಸಿ, ನಂತರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ನೇಹ ಲೇಡಿಸ್ ಕ್ಲಬ್ ಅಧ್ಯಕ್ಷೆ ಮೈತ್ರೇಯಿ ಬಿಸ್ವಾಸ್, ಪ್ರೊ. ಕವಿತಾ ರಾಥೋಡ್, ವೀರಶೈವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಣ್ಣ ಬಸವರಾಜ್, ಸತ್ಯಂ ಶಾಲೆ ಅಧ್ಯಕ್ಷ ಎ. ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾರ್ಯಕ್ರಮದ ಕೊನೆಗೆ ಅತಿಥಿಗಳನ್ನು ಗೌರವಿಸಿ, ಸನ್ಮಾಯಿಸಲಾಯಿತು. ಆರ್. ಜಗದೀಶ್ ಕುಮಾರ್, ಸಿಬ್ಬಂದಿ, ಇದ್ದರು.

ಗ್ರಾಪಂ, ತಾಪಂ ಚುನಾವಣೆ: ಮದ್ಯ ಮಾರಾಟ ನಿಷೇಧ
ಬಳ್ಳಾರಿ: ಹೂವಿನಹಡಗಲಿ ತಾಲೂಕು ಹೊಳಲು ತಾಪಂ ಸದಸ್ಯ ಸ್ಥಾನ, ಹೊಸಪೇಟೆ ತಾಲೂಕಿನ ಹೊಸೂರು ಗ್ರಾಪಂ ಸದಸ್ಯ ಸ್ಥಾನಕ್ಕೆ ಮಾ. 2ರಂದು ಚುನಾವಣೆ ನಡೆಯಲಿದ್ದು, ಕ್ಷೇತ್ರದ ಸುತ್ತ ಎಲ್ಲ ಮದ್ಯ ಮಾರಾಟ ನಿಷೇಧಿಸಿ ಡಿಸಿ ಎ.ಎ. ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಹಡಗಲಿ ತಾಲೂಕಿನ ಬೂದನೂರು, ಹೊಳಲು, ನಡುವಿನ ತಾಂಡಾ, ಗೊರವಿನಗುಡ್ಡ ತಾಂಡಾ, ಹೊಸಪೇಟೆ ತಾಲೂಕಿನ ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಮಾ. 1ರ ಮಧ್ಯರಾತ್ರಿ 12ರಿಂದ ಮಾ. 3ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಿದೆ. ಮಾರ್ಚ್ 5ರಂದು ಹಡಗಲಿ ತಾಲೂಕು ಕೇಂದ್ರಸ್ಥಾನದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಮಾರ್ಚ್ 4ರಂದು ಮಧ್ಯರಾತ್ರಿ 12 ಗಂಟೆಯಿಂದ 5ರಂದು ಮಧ್ಯರಾತ್ರಿ 12 ಗಂಟೆ ವರೆಗೆ ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಿಷೇಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಜಾಗೃತಿ ಮೂಡಿದಾಗ ಜಾಗರಣೆಗೆ ಅರ್ಥ
ಹೂವಿನಹಡಗಲಿ: ರಾತ್ರಿಯೆಲ್ಲ ಟಿವಿ, ಕಥೆ, ಸಿನಿಮಾ, ನಾಟಕಗಳನ್ನು ನೋಡುತ್ತ ಕುಳಿತರೆ ಜಾಗರಣೆಗೆ ಅರ್ಥ ಬರುವುದಿಲ್ಲ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಶೀಲಾಜಿ ಹೇಳಿದರು. ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ 78ನೇ ತ್ರಿಮೂರ್ತಿ ಮಹಾ ಶಿವರಾತ್ರಿ ಜಯಂತಿಯ 12 ಜ್ಯೋತಿರ್ಲಿಂಗ ದರ್ಶನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರೀತಿ, ವಿಶ್ವಾಸ, ಸಹೋದರತ್ವ ಕಳೆದುಕೊಂಡರೆ ಅತ್ಯಾಚಾರ, ಅನಾಚಾರದಂಥ ಸಮಾಜಬಾಹಿರ ಚಟುವಟಿಕೆ ಹೆಚ್ಚಾಗುತ್ತವೆ ಎಂದರು. ದ್ವಾದಶ ಲಿಂಗುಗಳ ದರ್ಶನದ ಮೆರವಣಿಗೆ ನಡೆಯಿತು. ಶೇಖರಗೌಡ, ಡಾ. ಶಂಕ್ರಮ್ಮ ಇದ್ದರು.

ಶ್ರೀಧರಗಡ್ಡೆ: ನಮೋ ಟೀ ಸ್ಟಾಲ್ಗೆ ಚಾಲನೆ
ಬಳ್ಳಾರಿ: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದಿಂದ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಮೋ ಟೀ ಸ್ಟಾಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ಸುಧೀರ್ಕುಮಾರ್ ನಮೋ ಟೀ ಸ್ಟಾಲ್ಗೆ ಚಾಲನೆ ನೀಡಿ, ನಂತರ ಮಾತನಾಡಿದರು. ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಗೌಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಕುಮಾರ್, ಮುಖಂಡ ಎಂ. ಬಸವರಾಜ, ಹರೀಶ್, ಸುಗುಣಾ ಹಾಗೂ ಟಿ. ಆದೆಪ್ಪ, ಎಸ್.ಬಿ. ಅಶೋಕ, ಬಸವರಾಜ, ಎ. ಮಲ್ಲನಗೌಡ, ಎಸ್. ಕೊಟ್ರೇಶ್, ಕೆ. ಗಾದಿಲಿಂಗಪ್ಪ ಸೇರಿದಂತೆ ಇತರರು ಇದ್ದರು.

ಟಾಟಾ ಏಸ್ ಪಲ್ಟಿ: ಓರ್ವ ಸಾವು, 19 ಕಾರ್ಮಿಕರಿಗೆ ಗಾಯ
ಕೂಡ್ಲಿಗಿ: ತಾಲೂಕಿನ ಜಂಗಮ ಸೋವೆನಹಳ್ಳಿ ಬಳಿ ಟಾಟಾ ಏಸ್ ಶನಿವಾರ ಬೆಳಗ್ಗೆ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿ, 19ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾದ ಘಟನೆ ಜರುಗಿದೆ. ಮೃತನನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ಓಬಳಾಪುರ ಗ್ರಾಮದ ಪಾಪಣ್ಣ (30) ಎಂದು ಗುರುತಿಸಲಾಗಿದೆ. ಶಿವಪುರದ ಜಗದೀಶ್, ಹುಲಿಗೆಮ್ಮ, ನಾಗರಾಜ, ಜಯಮ್ಮ, ಚೌಡಮ್ಮ ಮತ್ತು ಪಾಂಡು ಗಂಭೀರವಾಗಿ ಗಾಯಗೊಂಡಿದ್ದರಿಂದ ಬಳ್ಳಾರಿ ವಿಮ್ಸ್ಗೆ ಕಳುಹಿಸಲಾಗಿದೆ. ಬೊಮ್ಮೇಶ, ಭವಗಜ್ಜ, ಸೋಮಕ್ಕ, ಮಾಯಮ್ಮ, ಶ್ರೀದೇವಿ, ಹುಲಿಗೆಮ್ಮ, ಬಸಮ್ಮ, ಲಿಂಗರಾಜ, ರುದ್ರಮ್ಮ, ನಾಣ್ಯಾಪುರದ ಓಬಳೇಶ, ರುದ್ರೇಶ್, ಹುಲಿಗೆಮ್ಮ ಸೇರಿದಂತೆ ಉಳಿದ ಗಾಯಾಳುಗಳು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಾಟಾ ಏಸ್ನಲ್ಲಿ ಎಂದಿನಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ಉಪನಾಯಕನಹಳ್ಳಿ ಕೋಳಿ ಫಾರಂ ಕೆಲಸಕ್ಕೆ ಕೆಲಸಕ್ಕೆ ಹೋಗುತ್ತಿದ್ದವರು ಅಮವಾಸ್ಯೆ ಇದೆ ಎಂದು ವಾಪಾಸ್ ಊರಿಗೆ ಬರುವಾಗ ಜಂಗಮ ಸೋವೆನಹಳ್ಳಿ ಬಳಿ ರಸ್ತೆಯಲ್ಲಿ ತಗ್ಗು ತಪ್ಪಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement