ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗ್ರಾಮೀಣರಿಗಾಗಿ ಹೆಚ್ಚು ಬಸ್ ವ್ಯವಸ್ಥೆ

Vishwanath S
Updated On : 2 Mar 2014, 11:43 am

ಬಳ್ಳಾರಿ: ಸಾರಿಗೆ ಸಂಸ್ಥೆ ಲಾಭ ನಷ್ಟದ ಕಡೆಗೆ ಹೆಚ್ಚಿನ ಗಮನ ಕೊಡದೆ, ಜನರ ಸೇವೆಯ ಉದ್ದೇಶದಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಬಸ್ಸುಗಳ ಸಂಚಾರ ಆರಂಭಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಳ್ಳಾರಿಯಲ್ಲಿ ನೂತನ ನಗರ ಸಾರಿಗೆ ಬಸ್ ಘಟಕ, ಸಿಬ್ಬಂದಿ ವಸತಿ ಗೃಹದ ಅಡಿಗಲ್ಲು ಸಮಾರಂಭ ಮತ್ತು ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕುರುಗೋಡಿನಲ್ಲಿ ರು. 99.85 ಲಕ್ಷ ವೆಚ್ಚದಲ್ಲಿ ಹೊಸಬಸ್ ಘಟಕ, ರು. 411 ಲಕ್ಷ ವೆಚ್ಚದಲ್ಲಿ ನಗರ ಸಾರಿಗೆ ಬಸ್ ಘಟಕ, ರು. 210 ಲಕ್ಷ ವೆಚ್ಚದಲ್ಲಿ ನೌಕರರ ವಸತಿ ಗೃಹಕ್ಕೆ ಶಿಲಾನ್ಯಾಸ ಮಾಡಲಾಗಿದ್ದು, 9 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ವಿಭಾಗದ 38 ಬಸ್ ಘಟಕಗಳ ನೌಕರರಿಗೆ ಈಗಾಗಲೆ ಗಣಕೀಕೃತ ರಜೆ ಮಂಜುರಾತಿ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಆಳವಡಿಸಲಾಗಿದೆ. ಈ ತೆರನಾದ ವ್ಯವಸ್ಥೆ ರಾಜ್ಯದಲ್ಲಿ ಪ್ರಥಮದ್ದಾಗಿದೆ ಎಂದರು.
ಬಡ ಜನತೆಗೆ ಅನುಕೂಲ: ಬಳ್ಳಾರಿ ಶಾಸಕ ಅನಿಲ್ ಲಾಡ್ ಮಾತನಾಡಿ, ಬಡ ಜನರಿಗೆ ಅನುಕೂಲವಾಗುವಂತೆ ನಗರ ಸಾರಿಗೆ ವ್ಯವಸ್ಥೆ ಹಾಗೂ ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಹೊಸ ಬಸ್ಗಳನ್ನು ಒದಗಿಸಲಾಗಿದೆ. ಬಳ್ಳಾರಿಯಲ್ಲಿ ನಿರ್ಮಲ ಶೌಚಾಲಯ ನಿರ್ಮಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ವಿನಂತಿಸಿದರು. ಈಶಾನ್ಯ ಸಾರಿಗೆ ಸಂಸ್ಧೆ ಎಂಡಿ ಜಿ.ಎನ್. ಶಿವಮೂರ್ತಿ ಸ್ವಾಗತಿಸಿ ಮಾತನಾಡಿ, ವಿಭಾಗ ಹಾಗೂ ಜಿಲ್ಲೆಯ ಸಾರಿಗೆ ಸಂಸ್ಥೆಯ ಕಾರ್ಯ ಚಟುವಟಿಕೆಗಳ ವಿವರ ನೀಡಿದರು. ಸಮಾರಂಭದಲ್ಲಿ ಪಾಲಿಕೆ ಸದಸ್ಯ ಬಸವರಾಜ್, ಫರ್ವೀನ್ ಬಾನು, ಆಶೋಕ ಕುಮಾರ್, ಆರ್ಟಿಒ ಪಂಪಾಪತಿ, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಆನಂದಪ್ಪ, ವಿವಿಧ ಮುಖಂಡರು, ಅಧಿಕಾರಿಗಳು ಇದ್ದರು.
ಕುಡಿತಿನಿ ನೂತನ ಬಸ್ ನಿಲ್ದಾಣ: ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮದಲ್ಲಿ ಶನಿವಾರ ಸಾರಿಗೆ ಸಚಿವ ರಾಮಲಿಂಗರೆಡ್ಡಿ ರು. 52.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣ ಉದ್ಘಾಟಿಸಿದರು. ನಂತರ ಮಾತನಾಡಿದರು. ಸಂಡೂರು ಶಾಸಕ ಈ. ತುಕರಾಂ ಮಾತನಾಡಿ, ಸಾರಿಗೆ ಇಲಾಖೆಯ ಕುಡಿತಿನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು, ಸ್ವಚ್ಛತೆ ಕಾಪಾಡಬೇಕೆಂದರು.
ಜಿಪಂ ಸದಸ್ಯ ಲಕ್ಷ್ಮಣ, ತಾಪಂ ಸದಸ್ಯೆ ಹುಚ್ಚಮ್ಮ, ಗ್ರಾಪಂ ಅಧ್ಯಕ್ಷ ಹುಲುಗಪ್ಪ, ಸದಸ್ಯರು, ಸಾರಿಗೆ ಸಂಸ್ಥೆ ಎಂಡಿ ಜಿ.ಎನ್. ಶಿವಮೂರ್ತಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement