ರೇಲ್ವೆ ಸಚಿವ ಖರ್ಗೆಗೆ ನಾಳೆ ಪೌರ ಸನ್ಮಾನ
ಕೊಟ್ಟೂರು: ಕೊಟ್ಟೂರು- ಹರಿಹರ ರೈಲು ಓಡಾಟಕ್ಕೆ ಚಾಲನೆ ನೀಡುವ ಮಾರ್ಚ್ 3ರಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೌರ ಸನ್ಮಾನ ಮಾಡುವ ನಿರ್ಣಯವನ್ನು ಪಟ್ಟಣ ಪಂಚಾಯಿತಿ ಆಡಳಿತ ಕೈಗೊಂಡಿದೆ. ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್, ಅಂದು ಸಚಿವರಿಗೆ ಕೊಟ್ಟೂರೇಶ್ವರ ಸ್ವಾಮಿ ಬೆಳ್ಳಿಯ ಮೂರ್ತಿ ಇರುವ ಫಲಕ ನೀಡಿ ಪೌರ ಪುರಸ್ಕಾರ ನೀಡಲು ಪಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ನಿರ್ಧರಿಸಿದ್ದಾರೆ. ಪೌರ ಸನ್ಮಾನಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವ ಅನುಮತಿ ಪಡೆಯಲಾಗುವುದು ಎಂದರು. ರೇಲ್ವೆ ಹೋರಾಟ ಸಮಿತಿ ಸಂಚಾಲಕ ಪಿ. ಶ್ರೀಧರಶೆಟ್ಟಿ ಮಾತನಾಡಿದರು. ಸಮಾರಂಭದಲ್ಲಿ ಪಾಲ್ಗೊಳ್ಳುವ ಜನತೆಗೆ ಹೋರಾಟ ಸಮಿತಿ ಮತ್ತು ನಾಗರಿಕರ ಬಳಗದಿಂದ ಚಿತ್ರಾನ್ನ ವಿತರಿಸಲಾಗುವುದು. ಇದಕ್ಕೆಂದೆ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ವಂತಿಗೆ ನೀಡಿದ್ದಾರೆ ಎಂದು ಎಂಜಿನಿಯರ್ ಶಾಂತಕುಮಾರ್ ತಿಳಿಸಿದರು. ಸಭೆಯಲ್ಲಿ ಪಪಂ ಉಪಾಧ್ಯಕ್ಷ ಎಸ್. ಗುರುಶಾಂತಪ್ಪ, ಸದಸ್ಯರಾದ ಬಿ.ಎಸ್. ವೀರೇಶ್, ಕೆ.ಎಂ. ಕೊಟ್ರಯ್ಯ, ಡಿಶ್ ಮಂಜುನಾಥ, ಬಾವಿಕಟ್ಟಿ ಶಿವಾನಂದ, ಬುಗ್ಗಳ್ಳಿ ಕೊಟ್ರೇಶ್, ಸೆರೆಗಾರ ವೆಂಕಟೇಶ್, ಪೀಸೆ ಪ್ರಭಾಕರ, ಕುರುಬರ ನಾಗಪ್ಪ, ಕೆ. ಮಂಜುನಾಥಗೌಡ, ಎಂ.ಎಂ. ರುದ್ರಯ್ಯ, ಬೂದಿ ಶಿವಕುಮಾರ್, ಎನ್. ಗೋಪಿ, ಪತ್ತಿಕೊಂಡ ಶಂಭುನಾಥ, ಬಿ. ಮರಿಸ್ವಾಮಿ, ರಾಜೇಶ್ ಕಾರ್ವ, ಜೆಸಿ ಅಧ್ಯಕ್ಷ ರವಿ, ಎಂಜಿನಿಯರ್ ಪ್ರಕಾಶ್, ಅಡಿಕೆ ಮಂಜುನಾಥ, ಪಿ.ಜಿ. ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.