ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದಶಕಗಳ ಕನಸು ನನಸಾಗುವ ಸಮಯ

Vishwanath S
Updated On : 3 Mar 2014, 11:53 am

ಬಳ್ಳಾರಿ: ಎರಡು ದಶಕಗಳ ಜನರ ಬೇಡಿಕೆಯಾದ ಬಯಲು ಸೀಮೆ, ಮಧ್ಯ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಆರಂಭವಾಗುವ ಕಾಲ ಈಗ ಒದಗಿ ಬಂದಿದೆ. ಕೊಟ್ಟೂರು ಹರಿಹರ ನೂತನ ರೈಲು ಮಾರ್ಗ ಮಾರ್ಚ್ 3ರ ಸೋಮವಾರ ಲೋಕಾರ್ಪಣೆಗೊಳ್ಳಲಿದೆ.
ರೈಲು ಮಾರ್ಗ ಆರಂಭವಾಗುವ ಈ ಸುಸಮಯ ರಾಷ್ಟ್ರೀಯ ಜಾಲಕ್ಕೆ ಕೊಟ್ಟೂರಿನಂತಹ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣ ಸೇರ್ಪಡೆಗೊಳ್ಳುವ ಮೂಲಕ ಮಹತ್ತರ ರೇಲ್ವೆ ನಕಾಶೆಯಲ್ಲಿ ಸ್ಥಾನಪಡೆದುಕೊಳ್ಳಲಿದೆ. ಈ ಮುಖೇನ ಮತ್ತಷ್ಟು ಬಗೆಯ ಅಭಿವೃದ್ಧಿ ಪರ್ವಕ್ಕೆ ಕೊಟ್ಟೂರು ಸಾಕ್ಷಿಯಾಗಲಿದೆ.
65 ಕಿ.ಮೀ. ವ್ಯಾಪ್ತಿಯ ಈ ರೈಲು ಮಾರ್ಗದ ಕಾಮಗಾರಿಗೆ 1995ರ ಜುಲೈ 15ರಂದು ಜಾಫರ್ ಷರೀಫ್ ಕೇಂದ್ರ ರೇಲ್ವೆ ಸಚಿವರಾದಾಗ ಚಾಲನೆ ದೊರೆತಿತ್ತು. ರು. 60 ಕೋಟಿ ವೆಚ್ಚವನ್ನು ಆಗ ನಿಗದಿಗೊಳಿಸಲಾಗಿತ್ತು. ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಈಗ ಅದರ ವೆಚ್ಚ ರು. 425 ಕೋಟಿಯದ್ದಾಗಿದೆ. ಕಾಮಗಾರಿಗೆ ಹತ್ತು ಹಲವು ವಿಘ್ನಗಳು ನಿರಂತರ ಕಾಡಿದವು. ಹೀಗಾಗಿ, ಸುಮಾರು 19 ವರ್ಷಗಳ ಸುದೀರ್ಘ ಅವಧಿ ಯವರೆಗೂ ಕಾಮಗಾರಿ ಸಾಗಿ ಇದೀಗ ರೈಲು ಓಡಾಟಕ್ಕೆ ಅನುವಾಗುವಂತಾಗಿದೆ.
ಪಕ್ಷಿನೋಟ: ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಸಂಪೂರ್ಣ ಸಂಪರ್ಕಿಸುವ ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲೂ ಇದೆ. ರಾಜ್ಯ ಸರ್ಕಾರ ರು. 283.34 ಕೋಟಿ ವೆಚ್ಚ ಮಾಡಿದ್ದರೆ ರೇಲ್ವೆ ಇಲಾಖೆ ರು. 141.66 ಕೋಟಿ ವ್ಯಯಿಸಿದೆ. ರಾಜ್ಯ ಸರ್ಕಾರ ಮತ್ತು ರೇಲ್ವೆ ಸಹಭಾಗಿತ್ವದೊಂದಿಗೆ ಪೂರ್ಣ ಪ್ರಮಾಣದ ರೈಲು ಮಾರ್ಗ ಇದೀಗ ಸಿದ್ಧಗೊಂಡಿದೆ. ಕೊಟ್ಟೂರು, ಬೆಣ್ಣಿಹಳ್ಳಿ, ಹರಪನಹಳ್ಳಿ, ತೆಲಗಿ, ಅಮರಾವತಿ ಕಾಲೋನಿಗಳಲ್ಲಿ ರೇಲ್ವೆ ನಿಲ್ದಾಣಗಳನ್ನು ರೈಲು ಓಡಾಟಕ್ಕೆಂದೇ ನಿರ್ಮಿಸಲಾಗಿದೆ. ಈ ಮಾರ್ಗದ ಯೋಜನೆಯಲ್ಲಿ 13 ದೊಡ್ಡ ಪ್ರಮಾಣದ ಸೇತುವೆಗಳು, 102 ಸಣ್ಣ ಪ್ರಮಾಣದ ಸೇತುವೆಗಳಲ್ಲದೇ 7 ಮೇಲು ಸೇತುವೆ, 32 ಕೆಳ ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ರೈಲು ಮಾರ್ಗದ ನಿರ್ಮಾಣಕ್ಕೆ 1041 ಹೆಕ್ಟೇರ್ ರೈತರ ಭೂಮಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. 6 ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮಿಸಿದೆ.
ರಾಜ್ಯದ ಸಚಿವರ ಪಾತ್ರ ನಿರ್ಣಾಯಕ: ಈ ಕಾಮಗಾರಿಗೆ ರಾಜ್ಯದವರೇ ಆದ ಆಗಿನ ರೇಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಶಿಲಾನ್ಯಾಸ ನೆರವೇರಿಸಿದ್ದರು. ಈಗ ರಾಜ್ಯದವರೇ ಆದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕೊಟ್ಟೂರು-ಹರಿಹರ ರೈಲು ಓಡಾಟಕ್ಕೆ ಚಾಲನೆ ನೀಡುತ್ತಿರುವುದು ಮಹತ್ವದ ವಿಷಯ. ರಾಜ್ಯದ ಮಹತ್ವದ ಯೋಜನೆಯಾದ ಈ ಮಾರ್ಗ ಜಾರಿಗೊಳ್ಳಲು ಈ ಇಬ್ಬರು ನಾಯಕರು ನಿರ್ವಹಿಸಿದ ಪಾತ್ರ ಮಹತ್ವದ್ದು. ನೆನೆಗುದಿಗೆ ಬೀಳುವ ಅಪಾಯ ಕಂಡಿದ್ದ ರೈಲು ಮಾರ್ಗ ಮಲ್ಲಿಕಾರ್ಜುನ ಖರ್ಗೆ ಮೂಲಕ ಮುಕ್ತಿ ಪಡೆಯುವಂತಾಗಿದ್ದು ನಿಜಕ್ಕೂ ಹೆಮ್ಮೆಯ ವಿಷಯ.
ರೈಲು ಮಾರ್ಗದ ಲಾಭ: ಕೊಟ್ಟೂರು-ಹರಿಹರ ರೈಲು ಮಾರ್ಗದ ರಚನೆಯಿಂದ ರೇಲ್ವೆ ಇಲಾಖೆಗೆ ವಾರ್ಷಿಕ ರು. 200ಕ್ಕೂ ಅಧಿಕ ಕೋಟಿ ಆದಾಯ ಸೇರಲಿದೆ. ಜಿಲ್ಲೆಯ ಅದಿರನ್ನು ಮಂಗಳೂರು, ಕಾರವಾರ ಬಂದರುಗಳಿಗೆ ನೇರವಾಗಿ ಸಾಗಿಸಬಹುದಾಗಿದೆ. ಬಂದರುಗಳಿಂದ ಪೆಟ್ರೋಲಿಯಂ, ಗೊಬ್ಬರ ಆಮದು ಪದಾರ್ಥಗಳಿಂದ ಹಿಂದುಳಿದ ಬಳ್ಳಾರಿ ಜಿಲ್ಲೆಗೆ ಸಾಗಾಣಿಕೆ ಆಗಲಿವೆ. ಬಳ್ಳಾರಿ, ಕೊಟ್ಟೂರು, ಹರಿಹರ, ಬೀರೂರು, ಕಡೂರು, ಹಾಸನ ಮುಖಾಂತರ ಮಂಗಳೂರಿಗೆ ಈ ರೈಲು ಮಾರ್ಗ ಸಂಪರ್ಕ ಕಲ್ಪಿಸಿಕೊಡಲಿದೆ. ಈ ರೈಲು ಮಾರ್ಗ ರಾಜ್ಯದಲ್ಲಿಯೇ ಹಾದುಹೋಗುವುದರಿಂದ ಸದ್ಯ ಆಂಧ್ರ ಪ್ರದೇಶ, ತಮಿಳುನಾಡು ಸರ್ಕಾರಕ್ಕೆ ಹೋಗುವ ರಾಜಸ್ವ ಕರ್ನಾಟಕದ ಬೊಕ್ಕಸಕ್ಕೆ ಸೇರಲಿದೆ.
ಆಹ್ವಾನ ಪತ್ರಿಕೆ: ಹೆಸರು ಕೈಬಿಟ್ಟ ರೇಲ್ವೆ ಇಲಾಖೆ
ಕೊಟ್ಟೂರು: ಕೊಟ್ಟೂರು-ಹರಿಹರ ನೂತನ ರೈಲು ಮಾರ್ಗದ ಉದ್ಘಾಟನೆ ಸಮಾರಂಭ ಆಹ್ವಾನ ಪತ್ರಿಕೆಯಲ್ಲಿ ನೈರುತ್ಯ ರೇಲ್ವೆ ಅಧಿಕಾರಿಗಳು ಹರಪನಹಳ್ಳಿ ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಹೆಸರನ್ನು ಕೈಬಿಟ್ಟಿದ್ದಾರೆ. ಹರಿಹರ ಶಾಸಕ ಎಚ್.ಎಸ್. ಶಿವಶಂಕರ, ದಾವಣಗೆರೆ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಹೆಸರು ಮುದ್ರಿಸಿದ್ದಾರೆ. ಎಂ.ಪಿ. ರವೀಂದ್ರ ಅವರನ್ನು ಉದ್ದೇಶ ಪೂರ್ವಕ ಕೈಬಿಟ್ಟಿರುವುದು ಅವರ ಅಭಿಮಾನಿ ಬಳಗ, ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ಕೈಗೊಳ್ಳುವಂತೆ ಮಾಡಿದೆ. ಕೊಟ್ಟೂರನ್ನು ಪ್ರತಿನಿಧಿಸುವ ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾ ನಾಯ್ಕ ಹೆಸರನ್ನೂ ಸರ್ಕಾರಿ ಶಿಷ್ಟಾಚಾರದ ಪ್ರಕಾರ ಮೇಲಸ್ತರದಲ್ಲಿ ಪ್ರಕಟಿಸದೆ ಬೇರೆ ಶಾಸಕರ ಹೆಸರನ್ನು ಮೇಲೆ ಪ್ರಕಟಿಸಿದ್ದೂ ವಿವಾದಕ್ಕೆ ಕಾರಣವಾಗಿದೆ. ಆಹ್ವಾನ ಪತ್ರಿಕೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸಲು ರೇಲ್ವೆ ಅಧಿಕಾರಿಗಳು ಪ್ರಯತ್ನಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆಹ್ವಾನ ಪತ್ರಿಕೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಕಾರ್ಯಕ್ಕೆ ಭಾನುವಾರ ಸಂಜೆಯಿಂದ ರೇಲ್ವೆ ಅಧಿಕಾರಿಗಳು ಮುಂದಾಗಿದ್ದಾರೆ. ಕೊಟ್ಟೂರು ತಾಪಂ ಸದಸ್ಯರು ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ್ದಾಗಿ ಸದಸ್ಯರಾದ ಕೆ.ಅಯ್ನಹಳ್ಳಿ ಎ.ಎಂ. ಗುರುಪ್ರಸಾದ್, ತೂಲಹಳ್ಳಿ ಹೇಮಣ್ಣ ತಿಳಿಸಿದ್ದಾರೆ.
ಶೀಘ್ರ ತಾಂತ್ರಿಕ ಕಾಮಗಾರಿ ಪೂರ್ಣಗೊಳಿಸಿ
ಹೊಸಪೇಟೆ: ಅತ್ಯಲ್ಪ ಅವಧಿಯಲ್ಲಿ ರಾಜ್ಯಕ್ಕೆ ಅಪಾರ ರೈಲ್ವೆ ಯೋಜನೆಗಳು ಮತ್ತು ನೂತನ ರೈಲುಗಳಿಗೆ ಚಾಲನೆ ನೀಡಿದ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆಸಕ್ತಿ ಹಾಗೂ ಪರಿಶ್ರಮದ ಫಲವಾಗಿ ರೈಲು ಸಂಚಾರದ ಭಾಗ್ಯವನ್ನು ಕಾಣುವಂತಾಗಿದೆ. ಆದರೆ ಸಂಚಾರ ಆರಂಭವಾದರೂ ಈ ಭಾಗದ ಜನರಿಗೆ ಕೊಟ್ಟೂರು-ಹರಿಹರ ರೈಲು ಇನ್ನೂ ಕೆಲದಿನಗಳ ಕಾಲ ಬೇವು-ಬೆಲ್ಲವಾಗಿಯೇ ಉಳಿಯಲಿದೆ. ಏಕೆಂದರೆ 2009-10ರ ಕೇಂದ್ರ ರೇಲ್ವೆ ಬಜೆಟ್‌ನಲ್ಲಿ ಹೊಸಪೇಟೆಯಿಂದ ಕೊಟ್ಟೂರು-ಹರಿಹರದ ವರೆಗೆ ರೇಲ್ವೆ ಸಂಚಾರದ ಘೋಷಣೆ ಮಾಡಲಾಗಿತ್ತು. ಆದರೆ, ಟಿಬಿ ಡ್ಯಾಂ- ವ್ಯಾಸನಕೆರೆ ರೇಲ್ವೆ ನಿಲ್ದಾಣಗಳ ನಡುವೆ ತಾಂತ್ರಿಕ ಕಾಮಗಾರಿ (ಸ್ಟೀಪರ್ ಗ್ರೇಡಿಯಂಟ್) ಅಪೂರ್ಣಗೊಂಡಿರುವುದರಿಂದ ಹೊಸಪೇಟೆ ವರೆಗೆ ರೇಲ್ವೆ ಸಂಪರ್ಕಕ್ಕೆ ಕಾಲ ಕೂಡಿಬಂದಿಲ್ಲ. ಆದುದರಿಂದ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಅಗತ್ಯ ಅನುದಾನ ಮಂಜೂರಾಗಿದ್ದು, ತ್ವರಿತ ಗತಿಯಲ್ಲಿ ತಾಂತ್ರಿಕ ದೋಷ ಸರಿಪಡಿಸಿ, ಹೊಸಪೇಟೆಯಿಂದ ರೈಲು ಸಂಚಾರಕ್ಕೆ ಚಾಲನೆ ನೀಡಬೇಕು. ನೂತನವಾಗಿ ಆರಂಭವಾಗುವ ರೈಲನ್ನು ಹರಿಹರದಿಂದ 2 ಕಿ.ಮೀ. ದೂರದಲ್ಲಿರುವ ಅಮರಾವತಿ ಕಾಲೋನಿಗೆ ಸೀಮಿತಗೊಳಿಸದೇ, ಬೆಂಗಳೂರು ಅಥವಾ ಮೈಸೂರಿಗೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಇಲಾಖೆಗೂ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೊಸಪೇಟೆ-ಕೊಟ್ಟೂರು-ಹರಿಹರ ರೇಲ್ವೆ ಹೋರಾಟ ಸಮಿತಿ ಮುಖಂಡರಾದ ವೈ. ಯಮುನೇಶ್, ಕೆ. ಮಹೇಶ್, ಪೂರ್ಣಚಂದ್ರ ಜಾಲಿ, ಯು. ಅಶ್ವತ್ಥಪ್ಪ, ಎಸ್.ಎಂ. ಪ್ರಕಾಶ್, ರಮೇಶ್ ಗೌಡ, ಮಹಮ್ಮದ್ ಹನೀಫ್ ಇತರರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಭೀಮಾ ನಾಯ್ಕ ಆಕ್ರೋಶ
ಕೊಟ್ಟೂರು: ಎರಡು ದಶಕಗಳ ಜನತೆಯ ಹೋರಾಟದ ಫಲ ಕೊಟ್ಟೂರು-ಹರಿಹರ ರೈಲು ಮಾರ್ಗದ ಚಾಲನೆ ಕಾರ್ಯವನ್ನು ಕಾಂಗ್ರೆಸ್ಸಿಗರು ಮುಂಬರುವ ಲೋಕಸಭಾ ಚುನಾವಣಾ ಪ್ರಚಾರದ ಗಿಮಿಕ್ಕಿಗಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಆರೋಪಿಸಿದರು. ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತರಾತುರಿಯಲ್ಲಿ ಸಮಾರಂಭ ಏರ್ಪಡಿಸಲಾಗಿದೆ. ಪೂರ್ವ ಸಿದ್ಧತಾ ಸಭೆಗೆ ತಮ್ಮನ್ನು ಸಂಪರ್ಕಿಸದೇ ರೇಲ್ವೆ ಅಧಿಕಾರಿಗಳು ಉದ್ದಟತನ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೇಲ್ವೆ ಇಲಾಖೆ ನಿರ್ಲಕ್ಷ್ಯ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ರೊಚ್ಚಿಗೆಬ್ಬಿಸಿದೆ. ಅವರೆಲ್ಲರ ಅಭಿಪ್ರಾಯ ಪಡೆದು ಸಮಾರಂಭದಲ್ಲಿ ಪಾಲ್ಗೊಳ್ಳುವ ಕುರಿತು ನಿರ್ಧರಿಸುತ್ತೇನೆ ಎಂದು ಹೇಳಿದರು.
ಖಂಡನೀಯ: ಆಹ್ವಾನ ಪತ್ರಿಕೆಯಲ್ಲಿ ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರರನ್ನು ಪ್ರಕಟಿಸದೇ ಉದ್ದೇಶ ಪೂರಕವಾಗಿ ಕೈಬಿಟ್ಟಿರುವುದನ್ನು ಅವರು ಖಂಡಿಸಿದ್ದಾರೆ.
ಕೊಟ್ಟೂರು-ಹರಿಹರ ರೈಲು ಮಾರ್ಗಕ್ಕೆ ಇಂದು ಚಾಲನೆ
ಬಳ್ಳಾರಿ: ಜಿಲ್ಲೆಯ ಬಹುದಿನಗಳ ಕನಸಾದ ಕೊಟ್ಟೂರು-ಹರಿಹರ ರೇಲ್ವೆ ಮಾರ್ಗಕ್ಕೆ ಮಾರ್ಚ್ 3ರಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಕೊಟ್ಟೂರಿಗೆ ಆಗಮಿಸಲಿರುವ ಅವರು, ಮಧ್ಯಾಹ್ನ 1.30ಕ್ಕೆ ಗುಲ್ಬರ್ಗಕ್ಕೆ ಪ್ರಯಾಣ ಮಾಡಲಿದ್ದಾರೆ.
ಐತಿಹಾಸಿಕ: ಹಲವು ಬಗೆಯ ಹೋರಾಟಗಳ ಫಲದಿಂದ ಇದೀಗ ಮೈದಳೆಯಲು ಸಿದ್ಧಗೊಂಡ ಕೊಟ್ಟೂರು-ಹರಿಹರ ರೈಲು ಓಡಾಟ ಆರಂಭಗೊಳ್ಳುವ ಮಾರ್ಚ್ 3ರಂದು ಕೊಟ್ಟೂರಿಗರಿಗೆ ಐತಿಹಾಸಕ ದಿನವೇ ಸರಿ. ಇದಕ್ಕಾಗಿ ಇಡೀ ಪಟ್ಟಣ ಸಡಗರ ಸಂಭ್ರಮಗಳಿಂದ ಸಜ್ಜುಗೊಂಡಿದೆ. ಎಲ್ಲರ ದೃಷ್ಟಿ ಸೋಮವಾರದತ್ತ ನೆಟ್ಟಿದೆ. ಈಗಾಗಲೇ ರೈಲು ನಿಲ್ದಾಣ ಮತ್ತು ರೈಲನ್ನು ಕಣ್ತುಂಬಿಕೊಳ್ಳಲು ಮಹಿಳೆಯರು, ಪುರುಷರೆನ್ನದೇ ಜನತೆ ಧಾವಿಸತೊಡಗಿದ್ದಾರೆ. ರೈಲು ಸಂಚಾರದ ಕನಸು ಕಂಡ ಹಲವರು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಗತಿಸಿ ಹೋಗಿದ್ದಾರೆ. ಸದ್ಯ ನಮಗಾದರೂ ಕೊಟ್ಟೂರು-ಹರಿಹರ ರೈಲು ನೋಡುವ ಯೋಗ ಬಂತೆಂಬ ಉತ್ಸಾಹ ಎಲ್ಲರಲ್ಲೂ ಕಾಣತೊಡಗಿದೆ.



-ಜಿ. ಸೋಮಶೇಖರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement