ಕೊಟ್ಟೂರು-ಹರಿಹರ ರೈಲು ಮಾರ್ಗಕ್ಕೆ ಹಸಿರು ನಿಶಾನೆ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮಾ. 3
ಸಾವಿರಾರು ಕೋಟಿ ಖರ್ಚು ಮಾಡಿದರೂ ಜನತೆಗೆ ಕೊಡಲಾಗದ ಮಹತ್ವದ ಯೋಜನೆ ಮತ್ತು ಲಾಭವನ್ನು ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ 371(ಜೆ)ಯ ಅನುಕೂಲತೆಗಳ ಮೂಲಕ ಯುಪಿಎ ಸರ್ಕಾರ ಒದಗಿಸಿಕೊಟ್ಟಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ತಾವು ಬೇಡಿಕೆ ಸಲ್ಲಿಸಿದ ಎಲ್ಲದಕ್ಕೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಯಾವುದೇ ಅಪಸ್ವರ ಎತ್ತದೆ ಸಮ್ಮತಿ ವ್ಯಕ್ತಪಡಿಸುವ ಮೂಲಕ ಮಹತ್ಸಾಧನೆ ಗೈಯ್ಯಲು ನೆರವಾಗಿದ್ದಾರೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೋಮವಾರ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ರೇಲ್ವೆ ನಿಲ್ದಾಣದಲ್ಲಿ ಕೊಟ್ಟೂರು-ಹರಿಹರ ನೂತನ ರೈಲು ಮಾರ್ಗವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹೈ-ಕ ಭಾಗದ ಜನತೆಗೆ ಪುನರ್ಜನ್ಮ ಪಡೆದ ಹೆಮ್ಮೆ ಈಗ ಆಗಿದೆ. ನಿಜಕ್ಕೂ ಇದೊಂದು ಮಹತ್ವದ ಸಾಧನೆ. ಆಂಧ್ರದ ತೆಲಂಗಾಣ ಭಾಗದ ಜನತೆಗೆ ಸಿಗುವ ಮಾನ್ಯತೆ ಪ್ರಮಾಣದಲ್ಲಿಯೇ ರಾಜ್ಯದ ಈ ಭಾಗದ ಜನರಿಗೂ ಸಿಗುವಂತೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಪ್ರಯೋಜನದ ವ್ಯಾಪ್ತಿಗೆ ಬಳ್ಳಾರಿ ಜಿಲ್ಲೆ ಸೇರಿಸಿದ್ದು, ಈ ಭಾಗ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಆಗಲಿದೆ. ರೇಲ್ವೆ ಇಲಾಖೆಯಲ್ಲಿ ತಾವು ಅಧಿಕಾರವಹಿಸಿಕೊಂಡ ಎಂಟು ತಿಂಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಿವೆ ಎಂದರು.
ರೇಲ್ವೆ ಖಾತೆ ಸಚಿವನಾಗಿ ಅಧಿಕಾರವಹಿಸಿಕೊಂಡ 8 ತಿಂಗಳ ಅವಧಿಯಲ್ಲಿಯೇ 22 ನೂತನ ರೈಲು ಮಾರ್ಗಗಳ ಚಾಲನೆಗೆ ಕ್ರಮಕೈಗೊಂಡಿದ್ದು ಗಮನಾರ್ಹ. ಈ ಬಗೆಯ ಸಾಧನೆ ಇಲ್ಲಿ ಆಗಿರಲಿಲ್ಲ. ರಾಜ್ಯದಲ್ಲಿನ ಬಹುತೇಕ ರೇಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದು ತಮ್ಮ ಅವಧಿಯಲ್ಲಿಯೇ ಎಂದ ಅವರು ರಾಜ್ಯ ಸರ್ಕಾರ ಸಹ ಅತ್ಯುತ್ತಮವಾಗಿ ಸ್ಪಂದಿಸುತ್ತಿದೆ. ರೈಲು ಮಾರ್ಗಗಳ ರಚನೆಗೆ ರಾಜ್ಯ ಸರ್ಕಾರ ಉಚಿತ ಭೂಮಿ ನೀಡುವತ್ತ ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆ. ಹೆಚ್ಚು ಹೆಚ್ಚು ರೈಲು ಮಾರ್ಗಗಳು ರಾಜ್ಯದಲ್ಲಿ ಜಾರಿ ಮಾಡಲು ಅವಧಿಯುದ್ದಕ್ಕೂ ಕೆಲಸ ನಿರ್ವಹಿಸಿರುವೆ ಎಂದು ಹೇಳಿದರು.
ತೋಟಗಾರಿಕಾ ಸಚಿವ ಡಾ. ಶಾಮನೂರು ಶಿವಶಂಕ್ರಪ್ಪ, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್. ಭೀಮಾನಾಯ್ಕ, ಎಚ್.ಪಿ. ರಾಜೇಶ್, ತುಕಾರಾಂ, ಸಂಸದೆ ಜೆ. ಶಾಂತಾ, ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.