ಸರ್ಕಾರಿ ಯೋಜನೆ ಸದುಪಯೋಗ ಪಡೆಯಿರಿ
ಹೊಸಪೇಟೆ: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಂಸದೆ ಜೆ. ಶಾಂತಾ ಹೇಳಿದರು. ತಾಲೂಕಿನ 76 ವೆಂಕಟಾಪುರ ಗ್ರಾಮದಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಿಂದ ನಿರ್ಮಿಸುವಂತೆ ಸ್ಥಳೀಯರು ನಿಗಾವಹಿಸಬೇಕು. ಉತ್ತಮ ಗುಣಮಟ್ಟದ ಕಾಮಗಾರಿಗಳು ಬಹುದಿನಗಳ ಕಾಲ ಬಾಳಿಕೆ ಬರುತ್ತವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು. 2012-13ನೇ ಸಾಲಿನ ಬಳ್ಳಾರಿ ಲೋಕಸಭಾ ಸಂಸದರ ಅನುದಾನದಲ್ಲಿ ತಾಲೂಕಿನ 76 ವೆಂಕಟಾಪುರ ಗ್ರಾಮದಲ್ಲಿ ಸಿಸಿ ರಸ್ತೆ, ರಂಗ ಮಂದಿರ ನಿರ್ಮಾಣ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು ಎಂದು ವಿವರಿಸಿದರು. ಬಿಜೆಪಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಪಂತರ್ ಜಯಂತ್, ಬಿಜೆಪಿ ಮುಖಂಡರಾದ ದೇವರಮನಿ ಶ್ರೀನಿವಾಸ, ಜಂಬಾನಳ್ಳಿ ವಸಂತಣ್ಣ, ಬಿಜೆಪಿ ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ವಿನಾಯಕ ಸ್ವಾಮಿ, ಮಲಪನಗುಡಿಯ ತಳವಾರ ಶಿವರಾಮಪ್ಪ, ಕಟ್ಟೆ ವೆಂಕಪ್ಪ, ಕಟ್ಟೆವಿರೂಪಾಕ್ಷ, ಮೆಹಬೂಬ್ ಸಾಬ್, ರಾಮಲಿಂಗಪ್ಪ, ಕುರುಬರ ಲಿಂಗಪ್ಪ, ರಮಾದೇವಿ, ಕಾಮಾಕ್ಷಮ್ಮ, ಮುತ್ತಮ್ಮ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.