ಅಕ್ಷರ ದಾಸೋಹ ಕಾರ್ಮಿಕರ ಸ್ಥಿತಿ ಗಂಭೀರ
ಬಳ್ಳಾರಿ: ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಇರುವ ಬಿಸಿಯೂಟ ಯೋಜನೆಯ ಅನುಷ್ಠಾನದ ಬೆನ್ನೆಲುಬಾಗಿರುವ ಅಕ್ಷರ ದಾಸೋಹ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನವಿಲ್ಲದೆ ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ಶೋಚನೀಯವಾಗಿದೆ ಎಂದು ಆಲ್ ಇಂಡಿಯಾ ಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ನಗರದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ ರು. 174 ಕೂಲಿ ನೀಡುವ ಸರ್ಕಾರ, ಅಕ್ಷರ ದಾಸೋಹ ಕಾರ್ಯಕರ್ತೆಯರಿಗೆ ಮಾತ್ರ ದಿನಕ್ಕೆ ರು. 35 ನೀಡುತ್ತಿರುವುದು ನಿಜಕ್ಕೂ ದುರಂತ. 10-12 ವರ್ಷಗಳಿಂದ ದುಡಿಯುತ್ತಿರುವ ಅಕ್ಷರ ದಾಸೋಹ ಕಾರ್ಮಿಕರಿಗೆ ಕನಿಷ್ಠ ವೇತನ ಇಲ್ಲದೆ ದುಸ್ತರವಾಗಿದೆ. ಜೀವನ ನಿರ್ವಹಣೆಗೆ ಸಾಕಾಗುವಷ್ಟು ವೇತನ ಪಡೆಯದ ಕಾರ್ಮಿಕರು ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ಸಂಘದ ಕಾರ್ಮಿಕರೆಲ್ಲರೂ ಸರ್ಕಾರದ ವಿರುದ್ಧ ಹೋರಾಡಲು ಸಜ್ಜುಗೊಳ್ಳಬೇಕು ಎಂದು ತಿಳಿಸಿದರು.
ವೇತನ ಹೆಚ್ಚಿಸಿ: ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾತನಾಡಿ, ಕಾರ್ಮಿಕರ ಹೋರಾಟಗಳಿಗೆ ಮಣಿದಿರುವ ಸರ್ಕಾರಗಳು ರಾಜ್ಯದಿಂದ ರು. 500 ಹಾಗೂ ಕೇಂದ್ರದಿಂದ ರು. 1000 ಹೆಚ್ಚಿಸಿರುವುದು ಸಂತಸದ ವಿಷಯವೆನಿಸಿದರೂ, ಇದು ಕಾರ್ಮಿಕರ ಕೆಲಸಕ್ಕೆ ತಕ್ಕ ಪ್ರತಿಫಲವಲ್ಲ. ವಿದ್ಯಾರ್ಥಿಗಳಿಗೆ ಇದೀಗ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಗೋದಿ, ಹಾಲು ನೀಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಇನ್ನಷ್ಟು ಕೆಲಸದ ಒತ್ತಡ ಹೆಚ್ಚಿಸಿದ್ದು, ಕೂಡಲೆ ರಾಜ್ಯ ಸರ್ಕಾರ ಕಾರ್ಮಿಕರ ವೇತನದಲ್ಲಿ ಇನ್ನಷ್ಟು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಸಂಘದ ರಾಜ್ಯ ಮುಖಂಡ ಎ. ದೇವದಾಸ್ ಸಮಾವೇಶದಲ್ಲಿ ಮಾತನಾಡಿದರು. ಸಂಘದ ಜಿಲ್ಲಾ ಮುಖಂಡರಾದ ಗೀತಾ ಅಧ್ಯಕ್ಷತೆ ವಹಿಸಿದ್ದರು. ನಂತರ ಕಾರ್ಮಿಕರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಹಳೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಗಾಂಧಿ ಭವನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಜಿಲ್ಲೆಯ ನೂರಾರು ಕಾರ್ಮಿಕರು ಭಾಗವಹಿಸಿದ್ದರು. ಸಮಾವೇಶದಲ್ಲಿ ಎಐಎಂಎಸ್ಎಸ್ ಜಿಲ್ಲಾ ಉಪಾಧ್ಯಕ್ಷೆ ಎ. ಶಾಂತಾ, ಸಂಘದ ಮಂಜುಳಾ, ಪಾರ್ವತಿ, ವಿಜಯಲಕ್ಷ್ಮೀ ಸೇರಿದಂತೆ ಸಂಘದ ನೂರಾರು ಕಾರ್ಮಿಕರು ಇದ್ದರು.