ಆಲಿಕಲ್ಲು ಮಳೆ: 50ಕ್ಕೂ ಹೆಚ್ಚು ಕುರಿಗಳ ಸಾವು
ಬಳ್ಳಾರಿ/ಕಂಪ್ಲಿ: ಬಳ್ಳಾರಿ ತಾಲೂಕಿನ ಕಪ್ಪಗಲ್ ಕ್ಯಾಂಪ್‌ನಲ್ಲಿ ಬುಧವಾರ ಸುರಿದ ಆಲಿಕಲ್ಲು ಮಳೆಗೆ 50ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದು, ಮೆಣಸಿನಕಾಯಿ ಬೆಳೆ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗಿವೆ.
1 ಕೆಜಿ ತೂಕದ ಆಲಿಕಲ್ಲು ಬೀಳುವುದನ್ನು ಕಂಡ ಜನರು ಅಚ್ಚರಿಪಟ್ಟರು. ಇನ್ನುಳಿದಂತೆ ಬಳ್ಳಾರಿ ತಾಲೂಕು ಹಾಗೂ ಸಿರುಗುಪ್ಪ ತಾಲೂಕಿನ ಕೆಲವು ಭಾಗದಲ್ಲಿ ಸಂಜೆ ಸ್ವಲ್ಪ ಕಾಲ ಅಕಾಲಿಕವಾಗಿ ಉತ್ತಮ ಮಳೆಯಾಗಿದೆ. ಬುಧವಾರ ಸಂಜೆ ಗಾಳಿ ಸಹಿತ ಬಳ್ಳಾರಿ ತಾಲೂಕಿನ ಕೆಲವು ಭಾಗದಲ್ಲಿ ಮಳೆಯಾಗಿದೆ. ಈ ಸಂದರ್ಭ ತಾಲೂಕಿನ ಕಪ್ಪಗಲ್, ಶಿವಪುರ, ಮೋಕಾದಲ್ಲಿ ಆಲಿಕಲ್ಲು ಮಳೆ ಸುರಿಯಿತು. ಕಪ್ಪಗಲ್ ಕ್ಯಾಂಪ್‌ನಲ್ಲಿ ಆಲಿಕಲ್ಲಿನ ಮಳೆಗೆ 50ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಕಪ್ಪಗಲ್‌ನ ಸಿರಿಗೇರಿ ಪನ್ನರಾಜ್ ಅವರ ಹಾಲಿನ ಡೈರಿಯಲ್ಲಿ 1 ಕೆಜಿ ಗಾತ್ರದ ಆಲಿಕಲ್ಲು ಬೀಳುವ ಮೂಲಕ ನೆರೆದ ಜನರ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಕಂಪ್ಲಿ ಭಾಗದಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ರಭಸದ ಆಲಿಕಲ್ಲು ಮಳೆಗೆ ಮೆಟ್ರಿ, ದೇವಲಾಪುರ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಬತ್ತ, ಬಾಳೆ, ಹತ್ತಿ, ತರಕಾರಿ ಬೆಳೆಗಳು ನಾಶವಾಗಿವೆ. ಕುರಿ, ಕೋಳಿಗಳು ಸತ್ತ ಪರಿಣಾಮ ಈ ಭಾಗದ ರೈತರು ಸಂಪೂರ್ಣ ನಷ್ಟಕ್ಕೀಡಾಗಿದ್ದಾರೆ. ಮಾವಿನಹಳ್ಳಿ ರೈತರು ಬೆಳೆದ ಬಾಳೆಗೊನೆಗಳು ನೆಲಕ್ಕುರುಳಿವೆ. ಬಿಡಿಸಬೇಕಿದ್ದ ಹತ್ತಿ ಮಳೆಯಿಂದಾಗಿ ಹಾಳಾಗಿದೆ. ಶ್ರೀರಾಮರಂಗಾಪುರ, ಸುಗ್ಗೆನಹಳ್ಳಿ, ಮಾವಿನಹಳ್ಳಿ ಗ್ರಾಮಗಳಲ್ಲಿ ಅಲ್ಲಲ್ಲಿ ರಾಶಿ ಹಾಕಿದ್ದ ಮೆಣಸಿನಕಾಸಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ.
ಮಾವಿನಹಳ್ಳಿ ಬಳಿಯಲ್ಲಿ ತಾಯಮ್ಮ, ನಿಂಗಪ್ಪ ಮತ್ತು ದುರುಗಮ್ಮನವರ 6 ಎಕರೆ ಹೊಲದಲ್ಲಿ ಅಪಾರ ಪ್ರಮಾಣದಲ್ಲಿ ಬಿದ್ದ ಆಲಿಕಲ್ಲು ಕರಗಿ ಹೊಂಡವಾಗಿದೆ. ಪ್ರಕೃತಿ ವಿಕೋಪಕ್ಕೀಡಾಗಿ ಆಲಿಕಲ್ಲು ಮಳೆಗೆ ಹಾನಿಯಾದ ಬೆಳೆ, ತರಕಾರಿ ಮತ್ತು ತೋಟಗಾರಿಕೆ ಬೆಳೆ ಹಾನಿ ಕುರಿತು ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಇಮಾಂಬಾಷಾ, ಸಹಾಯಕ ತೋಟಗಾರಿಕೆ ಅಧಿಕಾರಿ ಸೈಯ್ಯದ್ ಮೆಹಬೂಬ್‌ಬಾಷಾ ಹಾಗೂ ಸಂಕ್ಲಾಪುರ ಗ್ರಾಮ ಲೆಕ್ಕಾಧಿಕಾರಿ ಮಾಹಾಂತೇಶ್ ದೇಶಪಾಂಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.