ಸುದ್ದಿ ಸಂಕ್ಷೇಪ
ಇಂದು ರಾಜ್ಯ ಸಮ್ಮೇಳನ
ಹೊಸಪೇಟೆ: ಉದ್ಯೋಗಾಧಾರಿತ ಅಭಿವೃದ್ಧಿ, ನಾಡಿನ ಸೌಹಾರ್ದತೆ, ಅಸಮಾನತೆಯ ವಿರುದ್ಧ ನಡೆಯಲಿರುವ ಡಿವೈಎಫ್ಐ ಸಂಘಟನೆಯ ರಾಜ್ಯ ಸಮ್ಮೇಳನ ಮಾ. 6ರಿಂದ 8ರ ವರೆಗೆ ಗದಗನಲ್ಲಿ ನಡೆಯಲಿದೆ. ಜಾಗತೀಕರಣದ ಯುಗದಲ್ಲಿ ಯುವಜನರ ಪರಿಸ್ಥಿತಿಗಳನ್ನು, ಸಂಸ್ಕೃತಿಯ ವಿಚಾರಗಳನ್ನು ಡಿವೈಎಫ್ಐ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತಿದೆ. ಈ ಸಮ್ಮೇಳನಕ್ಕೆ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದಿಂದ ಕೃಷ್ಣ ಬಡಿಗೇರ್ ಮತ್ತು ಪ್ರವೀಣ್ ಕಲಾಲ್ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಉಚಿತ ಚಿಕಿತ್ಸೆ ಶಿಬಿರ
ಹಗರಿಬೊಮ್ಮನಹಳ್ಳಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾ. 6ರಂದು ನೇತ್ರ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಮೈತ್ರಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಬೆಂಗಳೂರಿನ ಶ್ರೀ ವಿವೇಕಾನಂದ ಸೇವಾಶ್ರಮ ಕಣ್ಣಾಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬಳ್ಳಾರಿ, ಭಾರತೀಯ ವೈದ್ಯಕೀಯ ಸಂಘ, ಮುಖ್ಯ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಭಾರತ ಜ್ಞಾನ ವಿಜ್ಞಾನ ಸಮಿತಿ ಹಗರಿಬೊಮ್ಮನಹಳ್ಳಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಆಯ್ಕೆಯಾದವರಿಗೆ ಮಾ. 7 ಮತ್ತು 8ರಂದು ಹೊಲಿಗೆ ರಹಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಲೆನ್ಸ್ ಅಳವಡಿಸುವ ವಿನೂತನ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ಮೈತ್ರಿ ಟ್ರಸ್ಟ್ ಅಧ್ಯಕ್ಷ ಅಮರನಾಥ ಚಿದ್ರಿ ತಿಳಿಸಿದ್ದಾರೆ. ವಿರಕ್ತಮಠ ಸಂಡೂರಿನ ಪ್ರಭುಸ್ವಾಮೀಜಿ, ನಂದಿಪುರದ ಮಹೇಶ್ವರಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಾ. ಮಾಧವರಾವ್ ಪಾಟೀಲ್, ಡಾ. ಅನಿಲ್ಕುಮಾರ್, ಡಾ. ಬಸವರಾಜ ರೆಡ್ಡಿ ಭಾವಹಿಸಲಿದ್ದಾರೆ.